ನವದೆಹಲಿ: ದೇಶದ ಅತಿ ದೊಡ್ಡ ಹೌಸಿಂಗ್ ಫೈನಾನ್ಸ್ ಕಂಪನಿ ಎಚ್‌ಡಿಎಫ್‌ಸಿ ಲಿಮಿಟೆಡ್, ಅತಿ ದೊಡ್ಡ ಖಾಸಗಿ ಬ್ಯಾಂಕ್ 'ಎಚ್‌ಡಿಎಫ್‌ಸಿ ಬ್ಯಾಂಕ್'ನಲ್ಲಿ ವಿಲೀನವಾಗುತ್ತಿರುವ ವಿಚಾರ ಷೇರುಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿ ಮಾಡಿದ್ದು, ಸೆನ್ಸೆಕ್ಸ್ ದಿನದಂತ್ಯಕ್ಕೆ 1300 ಅಂಕಗಳ ಏರಿಕೆ ಕಂಡಿದೆ.
ಕಾರ್ಪೊರೇಟ್ ಇತಿಹಾಸದಲ್ಲಿ ಅತಿದೊಡ್ಡ ವಿಲೀನ ಇದಾಗಿದ್ದು, ಭಾರತದ ಅತಿದೊಡ್ಡ ಹೌಸಿಂಗ್ ಫೈನಾನ್ಸ್ ಕಂಪನಿ ಊಆಈಅ ಲಿಮಿಟೆಡ್, ದೇಶದ ಅತಿದೊಡ್ಡ ಖಾಸಗಿ ಸಾಲದಾತ ಊಆಈಅ ಬ್ಯಾಂಕ್‌ನೊಂದಿಗೆ ಬ್ಯಾಂಕಿಂಗ್ ಬೆಹೆಮೊತ್ ಅನ್ನು ರಚಿಸಲು ವಿಲೀನಗೊಳ್ಳಲಿದೆ. ಎಚ್‌ಡಿಎಫ್‌ಸಿ ಲಿಮಿಟೆಡ್ ಎಚ್‌ಡಿಎಫ್‌ಸಿ ಬ್ಯಾಂಕ್'ನಲ್ಲಿ ವಿಲೀನವಾಗುತ್ತಿರುವ ಕುರಿತು ಪ್ರಕಟಣೆ ಹೊರ ಬೀಳುತ್ತಿದ್ದಂತೆ ಎಚ್‌ಡಿಎಫ್‌ಸಿ ಲಿಮಿಟೆಡ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಎರಡರ ಷೇರು ಬೆಲೆ ಶೇಕಡ 10ರಷ್ಟು ಏರಿಕೆ ದಾಖಲಿಸಿದೆ. ಎಚ್‌ಡಿಎಫ್‌ಸಿ ಲಿಮಿಟೆಡ್ ಪ್ರತಿ ಷೇರು ಬೆಲೆ 2,636ರೂ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್ ಷೇರು ಬೆಲೆ 1,630ರೂಗೆ ತಲುಪಿದೆ. ವಿಲೀನ ಪ್ರಕ್ರಿಯ ಬಳಿಕ 25 ಎಚ್‌ಡಿಎಫ್‌ಸಿ ಲಿಮಿಟೆಡ್ ಷೇರುಗಳನ್ನು ಹೊಂದಿರುವ ಹೂಡಿಕೆದಾರರಿಗೆ ಎಚ್‌ಡಿಎಫ್‌ಸಿ ಬ್ಯಾಂಕ್‌ನ 42 ಷೇರುಗಳು ಜಮೆಯಾಗಲಿವೆ.
ಪ್ರಸ್ತುತ ಎಚ್‌ಡಿಎಫ್‌ಸಿ ಲಿಮಿಟೆಡ್‌ನ ಒಟ್ಟು ಆಸ್ತಿ ಮೌಲ್ಯ 6.23ರೂ ಲಕ್ಷ ಕೋಟಿ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಆಸ್ತಿ ಮೌಲ್ಯ 19.38 ಲಕ್ಷ ರೂ ಕೋಟಿ ಇದೆ. ಎಚ್‌ಡಿಎಫ್‌ಸಿ ಬ್ಯಾಂಕ್ 3,000ಕ್ಕೂ ಹೆಚ್ಚು ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಒಟ್ಟು 6,342 ಶಾಖೆಗಳನ್ನು ಹೊಂದಿದ್ದು, 6.8 ಕೋಟಿ ಗ್ರಾಹಕರನ್ನು ಒಳಗೊಂಡಿರುವುದಾಗಿ ವರದಿಯಾಗಿದೆ. ವಿಲೀನ ಪ್ರಕ್ರಿಯೆಯು 2023–2024ನೇ ಹಣಕಾಸು ವರ್ಷದ ಎರಡು ಮತ್ತು ಮೂರನೇ ತ್ರೈಮಾಸಿಕದಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ.
ಸೆನ್ಸೆಕ್ಸ್ ಏರಿಕೆ
ಎಚ್‌ಡಿಎಫ್‌ಸಿ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ನಡುವಿನ ವಿಲೀನದ ಘೋಷಣೆಯ ನಂತರ ಬ್ಯಾಂಕಿಂಗ್ ಮತ್ತು ಹಣಕಾಸು ಷೇರುಗಳಲ್ಲಿನ ತೀವ್ರ ಖರೀದಿಯಿಂದ ಷೇರುಮಾರುಕಟ್ಟೆ ಉತ್ತೇಜಿತಗೊಂಡಿದ್ದು, ಸೆನ್ಸೆಕ್ಸ್ 1300 ಅಂಕಗಳ ಏರಿಕೆಯಾಗಿ 60,000 ಮಟ್ಟವನ್ನು ಮರುಪಡೆದು, 60,611.74ಅಂಕಗಳಿಗೆ ದಿನದ ವಹಿವಾಟು ಅಂತ್ಯಗೊಳಿಸಿದೆ.
ಅಂತೆಯೇ, ಎನ್‌ಎಸ್‌ಇ ನಿಫ್ಟಿ 382.95 ಪಾಯಿಂಟ್‌ಗಳು ಅಥವಾ ಶೇಕಡಾ 2.17 ರಷ್ಟು ಏರಿಕೆಕಂಡು 18,053.40 ಅಂಶಗಳಿಗೆ ದಿನದ ವಹಿವಾಟು ಕೊನೆಗೊಳಿಸಿತು. ಇಂದಿನ ವಹಿವಾಟಿನಲ್ಲಿ ಎಚ್ ಡಿಎಫ್ ಸಿ ಮಾತ್ರವಲ್ಲದೇ ಕೋಟಾಕ್ ಬ್ಯಾಂಕ್, ಎಚ್‌ಯುಎಲ್, ಎಲ್ & ಟಿ, ಇಂಡಸ್‌ಇಂಡ್ ಬ್ಯಾಂಕ್ ಮತ್ತು ಸನ್ ಫಾರ್ಮಾ ಸಂಸ್ಥೆಗಳ ಷೇರುಗಳ ಮೌಲ್ಯ ಏರಿಕೆಯಾಗಿದೆ. ಮತ್ತೊಂದೆಡೆ, ಟೈಟನ್ ಮತ್ತು ಇನ್ಫೋಸಿಸ್ ಸಂಸ್ಥೆಗಳ ಷೇರುಗಳ ಮೌಲ್ಯದಲ್ಲಿ ಅಲ್ಪ ಕುಸಿತ ಕಂಡುಬಂದಿದೆ.