ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಸಂಗ್ರಹವು ಮಾರ್ಚ್ ತಿಂಗಳಲ್ಲಿ ಸಾರ್ವಕಾಲಿಕ ದಾಖಲೆ ಬರೆದಿದ್ದು, ತೆರಿಗೆ ಸಂಗ್ರಹ ಬರೋಬ್ಬರಿ 1.42 ಲಕ್ಷ ಕೋಟಿ ರೂಪಾಯಿ ತಲುಪಿದ್ದು, ಹಿಂದಿನ ತಿಂಗಳಿಗಿಂತ ಶೇ 6.8 ರಷ್ಟು ಹೆಚ್ಚಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಶುಕ್ರವಾರ ಮಾಹಿತಿ ನೀಡಿದೆ.
ಮಾರ್ಚ್ 2022 ರಲ್ಲಿ ಜಿಎಸ್ ಟಿ ಆದಾಯವು ಒಟ್ಟು 1,42,095 ಕೋಟಿ ರೂಪಾಯಿ ಸಂಗ್ರಹವಾಗಿದೆ. ಇದರಲ್ಲಿ ಸಿಜಿಎಸ್ ಟಿ 25,830 ಕೋಟಿ ರೂಪಾಯಿ, ಎಸ್ ಜಿಎಸ್ ಟಿ 32,378 ಕೋಟಿ ರೂಪಾಯಿ, ಐಜಿಎಸ್ ಟಿ 74,470 ಮತ್ತು ಮತ್ತು ಪರಿಹಾರ ಸೆಸ್ 9,417 ಕೋಟಿ ರೂ. ಎಂದು ತಿಳಿಸಲಾಗಿದೆ.
ಮಾರ್ಚ್ 2022 ರಲ್ಲಿ ಸಂಗ್ರಹವಾದ ಒಟ್ಟು ಜಿಎಸ್ ಟಿ ಸಾರ್ವಕಾಲಿಕ ಗರಿಷ್ಠವಾಗಿದ್ದು, ಜನವರಿಯಲ್ಲಿ ಸಂಗ್ರಹಿಸಲಾದ 1,40,986 ಕೋಟಿ ರೂ.ಗಳ ಹಿಂದಿನ ದಾಖಲೆಯನ್ನು ಮುರಿದಿದೆ.
ಮಾರ್ಚ್ 2022ರ ಜಿಎಸ್ ಟಿ ಆದಾಯವು ಕಳೆದ ವರ್ಷದ ಇದೇ ತಿಂಗಳ ಜಿಎಸ್‌ಟಿ ಆದಾಯಕ್ಕಿಂತ ಶೇ. 15 ರಷ್ಟು ಹೆಚ್ಚಾಗಿದೆ ಎಂದು ಹಣಕಾಸು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
"ಇನ್ವರ್ಟೆಡ್ ಡ್ಯೂಟಿ ರಚನೆಯನ್ನು ಸರಿಪಡಿಸಲು ಜಿಎಸ್ ಟಿ ಕೌನ್ಸಿಲ್ ಕೈಗೊಂಡ ವಿವಿಧ ದರಗಳ ತರ್ಕಬದ್ಧ ಕ್ರಮಗಳಿಂದ ಆದಾಯದಲ್ಲಿ ಸುಧಾರಣೆಯಾಗಿದೆ" ಎಂದು ಹಣಕಾಸು ಸಚಿವಾಲಯ ಹೇಳಿದೆ.