ಜೈಪುರ: ಗರ್ಭಿಣಿಯಾಗಬೇಕೆಂಬ ವಿವಾಹಿತ ಮಹಿಳೆಯ ಆಸೆಯನ್ನು ಈಡೇರಿಸಲು ರಾಜಸ್ಥಾನದ ಜೋಧಪುರ್ ಹೈಕೋರ್ಟ್ ಪೀಠ ಆಕೆಯ ಗಂಡನನ್ನು 15 ದಿನಗಳ ಕಾಲ ಪೆರೋಲ್ ಮೇಲೆ ಬಿಡುಗಡೆ ಮಾಡಿದೆ.
ಆರೋಪಿ ನಂದಲಾಲ್ (34) ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾನೆ.
ನ್ಯಾಯಾಧೀಶರಾದ ಸಂದೀಪ್ ಮೆಹ್ತಾ ಮತ್ತು ಫರ್ಜಂದ್ ಅಲಿ ಅವರನ್ನೊಳಗೊಂಡ ವಿಭಾಗೀಯ ಪೀಠವು ವಿಚಾರಣೆ ನಡೆಸಿ, ಮಹಿಳೆಯು ತಾಯಿ ಆಗುವುದರಿಂದ ವಂಚಿತಳಾಗಬಾರದು ಎಂದು ಹೇಳಿ ಭಿಲ್ವಾರಾ ಜಿಲ್ಲೆಯ ನಿವಾಸಿ ನಂದಲಾಲ್ ಎಂಬಾತನಿಗೆ ಈ 15 ದಿನಗಳ ಪೆರೋಲ್ ಮಂಜೂರು ಮಾಡಿದೆ.
ಕಾನೂನು ಅಂಶವನ್ನು ಉಲ್ಲೇಖಿಸಿದ ನ್ಯಾಯಾಲಯ ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಬದುಕುವ ಮೂಲಭೂತ ಹಕ್ಕಿನೊಂದಿಗೆ ಮಕ್ಕಳನ್ನು ಹೊಂದುವ ಹಕ್ಕು ಸಹ ಇದೆ ಎಂದು ನ್ಯಾಯಾಲಯವು ತಿಳಿಸಿದೆ. ಯಾವುದೇ ವ್ಯಕ್ತಿಯು ತನ್ನ ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ಕಳೆದುಕೊಳ್ಳಬಾರದು ಎಂದು ಸಂವಿಧಾನವು ಖಾತರಿಪಡಿಸುತ್ತದೆ. ಇದರಲ್ಲಿ ಕೈದಿಗಳೂ ಸೇರಿದ್ದಾರೆ ಎಂದು ನ್ಯಾಯಾಮೂರ್ತಿ ಹೇಳಿದರು.
ರಾಜಸ್ಥಾನದ ಭಿಲ್ವಾರಾ ನ್ಯಾಯಾಲಯವು ಪ್ರಕರಣವೊಂದರಲ್ಲಿ ನಂದಲಾಲ್‌ಗೆ 2019ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಿದೆ. ಈತ ಅಜ್ಮೀರ್ ಸೆಂಟ್ರಲ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ. ನಂದಲಾಲ್ ಈ ಹಿಂದೆ 2021 ರಲ್ಲಿ 20 ದಿನಗಳ ಪೆರೋಲ್‌ನಲ್ಲಿ ಬಿಡುಗಡೆಯಾಗಿದ್ದರು. ಇದೀಗ ಪೆರೋಲ್ ಮೇಲೆ ಹೊರ ಹೋಗಲು 50 ಸಾವಿರ ರೂ. ವೈಯಕ್ತಿಕ ಬಾಂಡ್ ಅನ್ನು ಜೈಲಿನ ಅಧೀಕ್ಷಕರಿಗೆ ಸಲ್ಲಿಸುವಂತೆ ನಂದಲಾಲ್‌ಗೆ ನ್ಯಾಯ ಪೀಠ ಸೂಚಿಸಿದೆ.