ನವದೆಹಲಿ: 1990ರ ದಶಕದ ಆರಂಭದಲ್ಲಿ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರಿಂದಾಗಿ ಕಾಶ್ಮೀರ ಪಂಡಿತರ 64,827 ಕುಟುಂಬಗಳು ಕಾಶ್ಮೀರ ಕಣಿವೆ ತೊರೆದಿವೆ. ಅವರೆಲ್ಲದೆಹಲಿ, ಜಮ್ಮು ಮತ್ತು ದೇಶದ ಇತರೆಡೆಗಳಲ್ಲಿ ನೆಲೆಸಿದ್ದಾರೆ ಎಂದು ಕೇಂದ್ರ ಸರ್ಕಾರ ಹೇಳಿದೆ.
1990ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯು ಆರಂಭವಾದಾಗಿನಿಂದ 14,091 ನಾಗರಿಕರು, 5,356 ಭದ್ರತಾ ಪಡೆ ಯೋಧರು ಜೀವ ಕಳೆದುಕೊಂಡಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯವು 2020-21ರ ವಾರ್ಷಿಕ ವರದಿಯಲ್ಲಿ ತಿಳಿಸಿದೆ.
'ಜಮ್ಮು ಮತ್ತು ಕಾಶ್ಮೀರದಲ್ಲಿನ ಭಯೋತ್ಪಾದನೆಯು ಗಡಿಯಲ್ಲಿ ಒಳನುಸುಳುತ್ತಿರುವ ಉಗ್ರರಿಂದ ಆಗುತ್ತಿದೆ' ಎಂದು ವರದಿ ಹೇಳಿದೆ.
ಭಯೋತ್ಪಾದನೆಯಿಂದಾಗಿ ಕಾಶ್ಮೀರಿ ಪಂಡಿತರಲ್ಲದೆ ಕೆಲವು ಸಿಖ್ ಮತ್ತು ಮುಸ್ಲಿಂ ಕುಟುಂಬಗಳು ಕಾಶ್ಮೀರ ಕಣಿವೆಯಿಂದ ಜಮ್ಮು, ದೆಹಲಿ ಮತ್ತು ದೇಶದ ಇತರ ಭಾಗಗಳಿಗೆ ವಲಸೆ ಹೋಗುವಂತಾಯಿತು ಎಂದು ಅದು ಹೇಳಿದೆ.
ಜಮ್ಮು ಗುಡ್ಡಗಾಡು ಪ್ರದೇಶಗಳಿಂದ ಸುಮಾರು 1,054 ಕುಟುಂಬಗಳು ಜಮ್ಮು ಬಯಲು ಸೀಮೆಗೆ ವಲಸೆ ಹೋಗಿವೆ ಎಂದು ಅದು ತಿಳಿಸಿದೆ.
ಜಮ್ಮು ಮತ್ತು ಕಾಶ್ಮೀರದ ಪರಿಹಾರ ಮತ್ತು ವಲಸೆ ಕಮಿಷನರ್ ಬಳಿ ಲಭ್ಯವಿರುವ ನೋಂದಣಿ ದಾಖಲೆಗಳ ಪ್ರಕಾರ, ಪ್ರಸ್ತುತ 43,618 ನೋಂದಾಯಿತ ಕಾಶ್ಮೀರಿ ವಲಸಿಗ ಕುಟುಂಬಗಳು ಜಮ್ಮುವಿನಲ್ಲಿ ನೆಲೆಸಿವೆ. 19,338 ಕುಟುಂಬಗಳು ದೆಹಲಿ ಮತ್ತು ಎನ್‌ಸಿಆರ್‌ನಲ್ಲಿ ನೆಲೆಸಿದ್ದು, 1,995 ಕುಟುಂಬಗಳು ಇತರ ಕೆಲವು ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನೆಲೆಸಿವೆ.
ಕಣಿವೆಯಲ್ಲಿ ಕಾಶ್ಮೀರಿ ವಲಸಿಗರಿಗೆ ಪುನರ್ವಸತಿ ಕಲ್ಪಿಸುವ ದೃಷ್ಟಿಯಿಂದ, ಪ್ರಧಾನ ಮಂತ್ರಿಗಳ ಪುನರ್‌ನಿರ್ಮಾಣ ಪ್ಯಾಕೇಜ್ - 2008ರ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ 3,000 ಉದ್ಯೋಗಗಳನ್ನು ಮತ್ತು ಪ್ರಧಾನ ಮಂತ್ರಿಗಳ ಅಭಿವೃದ್ಧಿ ಪ್ಯಾಕೇಜ್ - 2015 (ಪಿಎಂಡಿಪಿ-2015) ಅಡಿಯಲ್ಲಿ ಹೆಚ್ಚುವರಿ 3,000 ಉದ್ಯೋಗಗಳ ಸೃಷ್ಟಿಗೆ ಕೇಂದ್ರ ಗೃಹ ಸಚಿವಾಲಯ ಅನುಮೋದನೆ ನೀಡಿದೆ.
ಕಣಿವೆಯಲ್ಲಿ ಈ 6,000 ಕಾಶ್ಮೀರಿ ವಲಸಿಗ ಉದ್ಯೋಗಿಗಳಿಗೆ ವಸತಿ ಕಲ್ಪಿಸಲು ₹ 920 ಕೋಟಿಯನ್ನೂ ಗೃಹ ಸಚಿವಾಲಯ ಅನುಮೋದಿಸಿದೆ.
ಈ ಯೋಜನೆಯಡಿಯಲ್ಲಿ, 1,025 ಫ್ಲ್ಯಾಟ್‌ಗಳು ಪೂರ್ಣಗೊಂಡಿದ್ದು, 1,488 ಫ್ಲ್ಯಾಟ್‌ಗಳು ನಿರ್ಮಾಣ ಹಂತದಲ್ಲಿವೆ.
2014 ರಿಂದ 2020ರವರೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನ ಪ್ರಾಯೋಜಿತ ಒಟ್ಟು 2,546 ಭಯೋತ್ಪಾದಕ ಕೃತ್ಯಗಳು ನಡೆದಿದ್ದು, ಇದರಲ್ಲಿ 481 ಭದ್ರತಾ ಸಿಬ್ಬಂದಿ, 215 ನಾಗರಿಕರು ಮತ್ತು 1,216 ಭಯೋತ್ಪಾದಕರು ಸಾವಿಗೀಡಾಗಿದ್ದಾರೆ ಎಂದು ವರದಿ ಹೇಳಿದೆ.
2014 ಮತ್ತು 2020 ರ ನಡುವೆ ಗಡಿಯಾಚೆಯಿಂದ ಜಮ್ಮು ಮತ್ತು ಕಾಶ್ಮೀರಕ್ಕೆ 1,776 ಒಳನುಸುಳುವಿಕೆ ಪ್ರಯತ್ನಗಳು ನಡೆದಿದ್ದು, ಅದರಲ್ಲಿ 685 ಸಫಲವಾಗಿವೆ.
ಪಿಎಂಡಿಪಿ-2015ರ ಅಡಿಯಲ್ಲಿ, ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರ (ಪಿಒಜೆಕೆ), ಛಂಬ್ ಮತ್ತು ನಿಯಾಬತ್‌ನಿಂದ ಸ್ಥಳಾಂತರಿಸಲ್ಪಟ್ಟು, ಜಮ್ಮು ಮತ್ತು ಕಾಶ್ಮೀರದಲ್ಲಿ ನೆಲೆಸಿರುವ 36,384 ಕುಟುಂಬಗಳಿಗೆ ತಲಾ 5.50 ಲಕ್ಷ ರೂಪಾಯಿಗಳ ಸಹಾಯ ಧನವನ್ನು ವಿತರಿಸಲಾಗುತ್ತಿದೆ ಎಂದು ವಾರ್ಷಿಕ ವರದಿ ತಿಳಿಸಿದೆ.