ನವದೆಹಲಿ: ಏಪ್ರಿಲ್ 16ರಿಂದ ದೇಶದ 1 ಲಕ್ಷ ಆಯುಷ್ಮಾನ್ ಭಾರತ್ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳಲ್ಲಿ (ಎಬಿ-ಎಚ್‌ಡಬ್ಲ್ಯುಸಿ) ಟೆಲಿ ಸಮಾಲೋಚನೆ ಸೌಲಭ್ಯ 'ಇ-ಸಂಜೀವಿನಿ' ಆರಂಭವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವೀಯಾ ಶುಕ್ರವಾರ ತಿಳಿಸಿದ್ದಾರೆ.
ಎಬಿ-ಎಚ್‌ಡಬ್ಲ್ಯುಸಿಗಳು ಮತ್ತು ಟೆಲಿ- ಕನ್ಸಲ್ಟೇಶನ್ ಸೇವೆಗಳ ಕಾರ್ಯಾಚರಣೆಯ ಸ್ಥಿತಿಯನ್ನು ಪರಿಶೀಲಿಸಲು ಎಲ್ಲ ರಾಜ್ಯಗಳ ಆರೋಗ್ಯ ಮಂತ್ರಿಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಹಿರಿಯ ಅಧಿಕಾರಿಗಳೊಂದಿಗೆ ವರ್ಚುವಲ್ ಸಭೆಯಲ್ಲಿ ಪಾಲ್ಗೊಂಡಿದ್ದ ಮಾಂಡವೀಯಾ, 'ಇ- ಸಂಜೀವಿನಿಯಿಂದಾಗಿ ಈಗ ಸಾಮಾನ್ಯ ನಾಗರಿಕರು ಕೂಡ ದೇಶದ ದೊಡ್ಡ ವೈದ್ಯರನ್ನು ಸಂಪರ್ಕಿಸಲು ಸಾಧ್ಯವಾಗಲಿದೆ' ಎಂದರು.
ಆಯುಷ್ಮಾನ್ ಭಾರತ್ ಆರೋಗ್ಯ ಮತ್ತು ಸ್ವಾಸ್ಥ ಕೇಂದ್ರಗಳ 4ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ 'ಇ- ಸಂಜೀವಿನಿ ಟೆಲಿ ಸಮಾಲೋಚನೆಗೆ ಏ. 16ರಂದು ಚಾಲನೆ ನೀಡಲಾಗುವುದು. ಈ ಕೇಂದ್ರಗಳು ಪ್ರಧಾನಿ ನರೇಂದ್ರ ಮೋದಿ ಅವರ ಆಯುಷ್ಮಾನ್ ಭಾರತದ ಸಂಕಲ್ಪವನ್ನು ಸಾಕಾರಗೊಳಿಸುತ್ತಿವೆ' ಎಂದು ಸಚಿವರು ಶುಕ್ರವಾರ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.