ನವದೆಹಲಿ: 90 ವರ್ಷದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮತ್ತು ಒಡಿಸ್ಸಿ ನರ್ತಕ ಗುರು ಮಾಯಾಧರ್ ರಾವುತ್ ಬಾಡಿಗೆಗಿದ್ದ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಿಸಿದ ಬೆನ್ನಲ್ಲೇ ಇದೀಗ ಕೇಂದ್ರ ಸರ್ಕಾರ ಮೇ 2ರೊಳಗೆ ತೆರವು ಮಾಡುವಂತೆ ಎಂಟು ಖ್ಯಾತ ಕಲಾವಿದರಿಗೆ ಸೂಚನೆ ನೀಡಿದೆ.
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, 28 ಕಲಾವಿದರ ಪೈಕಿ ಸುಮಾರು ಎಂಟು ಕಲಾವಿದರು ಹಲವಾರು ಬಾರಿ ನೋಟಿಸ್ ನೀಡಿದರೂ ಸರ್ಕಾರಿ ವಸತಿ ಗೃಹಗಳನ್ನು ಖಾಲಿ ಮಾಡಿರಲಿಲ್ಲ.
ಈ ಎಂಟು ಕಲಾವಿದರು ತಮ್ಮ ಬಂಗಲೆಗಳನ್ನು ಖಾಲಿ ಮಾಡುವ ಪ್ರಕ್ರಿಯೆಯಲ್ಲಿದ್ದಾರೆ ಎಂದು ನಮಗೆ ಭರವಸೆ ನೀಡಿದರು. ಅದಕ್ಕೆ ಇನ್ನೂ ಕೆಲವು ದಿನಗಳ ಕಾಲಾವಕಾಶ ಕೇಳಿದ್ದಾರೆ. ಮೇ 2ರವರೆಗೆ ಖಾಲಿ ಮಾಡಲು ಅವಕಾಶ ನೀಡುವಂತೆ ಪತ್ರ ಬರೆದಿದ್ದು ಅದರಂತೆ ಸಮಯ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗುರು ಮಾಯಾಧರ್ ರಾವುತ್ ಅವರನ್ನು ತೆರವುಗೊಳಿಸಲಾಗಿದ್ದು ಅವರ ಮನೆಯ ವಸ್ತುಗಳನ್ನು ತೆಗೆದು ಹೊರಗಡೆ ಇಡಲಾಗಿದೆ.
ಸರ್ಕಾರದ ನೀತಿಯ ಪ್ರಕಾರ, ಕಲಾವಿದರ ಗಳಿಕೆಯು ತಿಂಗಳಿಗೆ 20,000 ರೂ.ಗಿಂತ ಕಡಿಮೆಯಿದ್ದರೆ ಸಂಸ್ಕೃತಿ ಸಚಿವಾಲಯದ ಶಿಫಾರಸಿನ ಮೇರೆಗೆ ವಿಶೇಷ ಕೋಟಾದ ಅಡಿಯಲ್ಲಿ 40 ಪ್ರತಿಷ್ಠಿತ ಕಲಾವಿದರಿಗೆ ವಸತಿ ಮಂಜೂರು ಮಾಡಬಹುದು.
ಈ ತಿಂಗಳ ಆರಂಭದಲ್ಲಿ, ದೆಹಲಿ ಹೈಕೋರ್ಟ್ ಶಾಸ್ತ್ರೀಯ ಕಲಾವಿದೆ ರೀಟಾ ಗಂಗೂಲಿ ಮತ್ತು ಇತರರಿಗೆ ರಾಷ್ಟ್ರ ರಾಜಧಾನಿಯಲ್ಲಿ ಸರ್ಕಾರಿ ಮಂಜೂರು ಮಾಡಿದ ನಿವಾಸಗಳನ್ನು ಏಪ್ರಿಲ್ ಅಂತ್ಯದೊಳಗೆ ಖಾಲಿ ಮಾಡುವಂತೆ ನಿರ್ದೇಶಿಸಿತ್ತು. ಅಲ್ಲದೆ ನಿವೇಶನ ಖಾಲಿ ಮಾಡಲು ಹೆಚ್ಚಿನ ಸಮಯವನ್ನು ನೀಡಲು ನಿರಾಕರಿಸಿತು.
ಏಕ ಸದಸ್ಯ ಪೀಠ ಈಗಾಗಲೇ ಎರಡು ತಿಂಗಳ ಸಮಯಾವಕಾಶವನ್ನು ನೀಡಿದ್ದು ಹೀಗಾಗಿ ಇನ್ನೊಂದು ದಿನವನ್ನು ಹೆಚ್ಚುವರಿಯಾಗಿ ನೀಡುವುದಿಲ್ಲ ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳಾದ ವಿಪಿನ್ ಸಂಘಿ ಮತ್ತು ನವೀನ್ ಚಾವ್ಲಾ ಅವರ ಪೀಠವು ಹೇಳಿತ್ತು.
2020ರ ಡಿಸೆಂಬರ್ 31 ರೊಳಗೆ ನಿವೇಶನವನ್ನು ಖಾಲಿ ಮಾಡಲು ಕೇಂದ್ರವು ಗಡುವು ನೀಡಿತ್ತು. ಇದರ ವಿರುದ್ಧ ಅರ್ಜಿ ಸಲ್ಲಿಕೆಯಾದ ನಂತರ ಹೈಕೋರ್ಟ್ ನೋಟಿಸ್‌ಗೆ ತಡೆ ನೀಡಿತು. ಅಲ್ಲದೆ ಅರ್ಜಿದಾರರು ಫೆಬ್ರವರಿಯಲ್ಲಿ ನೀಡಿದ ಆದೇಶವನ್ನು ಪಾಲಿಸದಿದ್ದಲ್ಲಿ ಕ್ರಮ ಕೈಗೊಳ್ಳಲು ಕೇಂದ್ರಕ್ಕೆ ಮುಕ್ತವಾಗಿದೆ ಎಂದು ನ್ಯಾಯಾಲಯ ಹೇಳಿತ್ತು.