ರಾಂಚಿ: ರಾಂಚಿಯಲ್ಲಿ ಉದ್ಯಮಿಯೊಬ್ಬರು ನಡೆಸುತ್ತಿರುವ ಆಹಾರ ಬ್ಯಾಂಕ್ ದಿನವೊಂದಕ್ಕೆ ಹಲವು ಮಂದಿ ಹಸಿದವರ ಹೊಟ್ಟೆ ತುಂಬಿಸುತ್ತಿದೆ.
ಸರ್ಕಾರಿ ಸ್ವಾಮ್ಯದ ರಾಜೇಂದ್ರ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಗೆ ಬರುವವರಿಗೆ ರೋಟಿ ಬ್ಯಾಂಕ್ ನೆರವಾಗುತ್ತಿದ್ದು, ಈ ಪ್ರದೇಶದಲ್ಲಿ 2.5 ವರ್ಷಗಳಿಂದ ವಿಜಯ್ ಪಾಠಕ್ ಎಂಬುವವರು ದಿನವೊಂದಕ್ಕೆ 200 ಮಂದಿಗೆ ಆಹಾರ ನೀಡುತ್ತಿದ್ದು ಇದರ ಪೂರ್ಣ ಖರ್ಚನ್ನು ತಾವೇ ಭರಿಸುತ್ತಿದ್ದಾರೆ. ಕೆಲವೊಮ್ಮೆ ಇತರರಿಂದ ಸೇವಾರ್ಥವಾಗಿ ಆಹಾರ ಧಾನ್ಯಗಳನ್ನು ಪಡೆದು ಆಹಾರ ಪೂರೈಕೆ ಮಾಡುತ್ತಾರೆ.
ಪಾದಚಾರಿ ಮಾರ್ಗದಲ್ಲಿ ಮಲಗುತ್ತಿದ್ದ 15-20 ಮಂದಿಗೆ ಆಹಾರ ಪೂರೈಕೆ ಮಾಡುವ ಮೂಲಕ ರೋಟಿ ಬ್ಯಾಂಕ್ ರಾಂಚಿಯನ್ನು ಪಾಠಕ್ ಹಾಗೂ ಅವರ ಪತ್ನಿ ಪ್ರಾರಂಭಿಸಿದರು.
"16 ವರ್ಷಗಳ ಹಿಂದೆ ನನ್ನ ತಂದೆ ಆರ್ ಐಎಂಎಸ್ ನಲ್ಲಿ ಒಂದು ತಿಂಗಳ ಕಾಲ ದಾಖಲಾಗಿದ್ದರು. ಈ ವೇಳೆ ಹಲವರು ಆಹಾರ ಪಡೆಯಲು ಹಣವಿಲ್ಲದೇ ಖಾಲಿ ಹೊಟ್ಟೆಯಲ್ಲಿ ಮಲಗುತ್ತಿದ್ದದ್ದನ್ನು ಕಂಡೆ, ನಾನು ಸಾಮರ್ಥ್ಯ ಗಳಿಸಿಕೊಂಡ ತಕ್ಷಣ ಇಂತಹ ಮಂದಿಗೆ ಉಚಿತ ಆಹಾರ ನೀಡುವ ನಿರ್ಧಾರವನ್ನು ಅಂದು ತೆಗೆದುಕೊಂಡೆ. ಅಂತೆಯೇ ಕೋವಿಡ್-19 ಪ್ರಾರಂಭಕ್ಕೂ ಕೆಲವೇ ಸಮಯದ ಮುನ್ನ ಅಂದರೆ 2020 ರ ಮಾ.1 ರಂದು ರೋಟಿ ಬ್ಯಾಂಕ್ ರಾಂಚಿಯನ್ನು ಪ್ರಾರಂಭಿಸಿದೆ" ಎಂದು ಪಾಠಕ್ ರೋಟಿ ಬ್ಯಾಂಕ್ ಪ್ರಾರಂಭವಾದ ಕಥೆಯನ್ನು ಹೇಳುತ್ತಾರೆ.
ಈ ಅಭಿಯಾನಕ್ಕಾಗಿ ಹಣ ಪಡೆಯುವುದಿಲ್ಲ, ಬೇರೆಯವರಿಂದ ಹಣ ಪಡೆದರೆ ಅದು ಉದ್ದೇಶವನ್ನು ಈಡೇರಿಸುವುದಿಲ್ಲ ಎಂದು ಪಾಠಕ್ ನಂಬಿದ್ದು, ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಆಹಾರ ಪ್ಲೇಟ್ ಗಳನ್ನು ನೀಡುವುದನ್ನು ರೋಟಿ ಬ್ಯಾಂಕ್ ರಾಂಚಿ ಎಂಬ ಫೇಸ್ ಬುಕ್ ಲೈವ್ ನಲ್ಲಿ ಹಾಕುತ್ತಾರೆ.
ಪ್ರತಿ ಆಹಾರ ಪ್ಲೇಟ್ ಗೂ 20 ರೂಪಾಯಿ ಖರ್ಚಾಗುತ್ತದೆ. ಅಷ್ಟನ್ನೂ ನಾನೇ ಭರಿಸುತ್ತೇನೆ, ಕೆಲವೊಮ್ಮೆ ಮಂದಿ ನನಗೆ ಆಹಾರ ಧಾನ್ಯಗಳನ್ನು ನೀಡುತ್ತಾರೆ.
ಕೆಲವೊಮ್ಮೆ ಮದುವೆ ಹಾಗೂ ಇನ್ನಿತರ ಸಮಾರಂಭಗಳಿಲ್ಲಿ ಹೆಚ್ಚಾದ ಆಹಾರವನ್ನು ರೋಟಿ ಬ್ಯಾಂಕ್ ಸಂಗ್ರಹಿಸುತ್ತದೆ ಅದನ್ನು ಬಡವರಿಗೆ ಹಂಚುತ್ತದೆ.
ಮಧುಕರ್ ಶ್ಯಾಮ್ ಎಂಬುವವರು ಆಹಾರ ಧಾನ್ಯಗಳನ್ನು ನೀಡುವ ಮೂಲಕ ಈ ಅಭಿಯಾನಕ್ಕೆ ಕೈ ಜೋಡಿಸಿದ್ದು, ಪಾಠಕ್ ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ ಎನ್ನುತ್ತಾರೆ. ನಾವು ಸಾಧ್ಯವಾದಷ್ಟೂ ಈ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇವೆ.
ತನ್ನ ಪತಿಗೆ ಚಿಕಿತ್ಸೆ ಕೊಡಿಸಲು ಇಲ್ಲಿಗೆ ಬಂದಿರುವ ಪಾರ್ವತಿ ದೇವಿ ಎಂಬುವವರು ಈ ಅಭಿಯಾನದ ಫಲಾನುಭವಿಯಾಗಿದ್ದು, ಹತ್ತಿರದ ಹೊಟೇಲ್ ಗಳಿಂದ ಆಹಾರ ಖರೀದಿಸಲು ಸಾಧ್ಯವಾಗುತ್ತಿಲ್ಲ. ಕಳೆದ 2 ದಿನಗಳಿಂದ ರೋಟಿ ಬ್ಯಾಂಕ್ ರಾಂಚಿ ನನಗೆ ಆಹಾರ ಒದಗಿಸುತ್ತಿದೆ" ಎಂದು ಸಂತಸ ವ್ಯಕ್ತಪಡಿಸಿದ್ದಾರೆ.