ನವದೆಹಲಿ : ಭಾರತದಲ್ಲಿ 2022 ನೇ ಆರ್ಥಿಕ ವರ್ಷದಲ್ಲಿ 1.67 ಲಕ್ಷ ಹೊಸ ಕಂಪನಿಗಳು ನೋಂದಣಿಯಾಗಿದ್ದು, ಈ ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ, ಇದು ದಾಖಲೆಯ ಏರಿಕೆಯಾಗಿದೆ.
ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಈ ಬಗ್ಗೆ ಮಾಹಿತಿ ನೀಡಿದ್ದು, ಕಳೆದ ವರ್ಷವೂ ನೋಂದಣಿಯಾಗಿದ್ದ ಸಂಸ್ಥೆಗಳ ಸಂಖ್ಯೆ ದಾಖಲೆಯ ಪ್ರಮಾಣದಲ್ಲಿತ್ತು. ಸತತ 2 ನೇ ವರ್ಷ ಕಂಪನಿಗಳ ನೋಂದಣಿ ದಾಖಲೆ ಕಂಡಿದೆ.
ಆರ್ಥಿಕ ವರ್ಷ 2021-22 ರಲ್ಲಿ ನೋಂದಣಿಯಾದ ಕಂಪನಿಗಳು 2020-21 ಕ್ಕಿಂತಲೂ ಶೇ.8 ರಷ್ಟು ಹೆಚ್ಚಿದ್ದು, 2018-19 ರಲ್ಲಿ 1.22 ಲಕ್ಷ ಕಂಪನಿಗಳನ್ನು ಎಂಸಿಎ ನೋಂದಣಿ ಮಾಡಿದ್ದರೆ, 2019-20 ರಲ್ಲಿ 1.22 ಲಕ್ಷ ಕಂಪನಿಗಳನ್ನು ನೋಂದಣಿ ಮಾಡಿತ್ತು. 2020-21 ರಲ್ಲಿ 1.55 ಲಕ್ಷ ಕಂಪನಿಗಳು ನೋಂದಣಿಯಾಗಿದ್ದವು.
ಉದ್ಯಮ ಸರಳೀಕರಣದ ಭಾಗವಾಗಿ ಸರ್ಕಾರ ಕೈಗೊಂಡ ಹಲವು ಕ್ರಮಗಳ ಫಲವಾಗಿ ಕಂಪನಿಗಳನ್ನು ಪ್ರಾರಂಭಿಸುವುದರಲ್ಲಿ ಸಮಯ ಹಾಗೂ ವೆಚ್ಚ ಕಡಿಮೆಯಾಗುತ್ತಿದ್ದು, ಕಂಪನಿಗಳ ನೋಂದಣಿ ಏರಿಕೆ ಕಂಡಿದೆ ಎಂದು ಸಚಿವಾಲಯ ಹೇಳಿದೆ.
2022 ನೇ ಸಾಲಿನಲ್ಲಿ ಅತಿ ಹೆಚ್ಚು ಕಂಪನಿಗಳನ್ನು ನೋಂದಣಿ ಮಾಡಿದ ರಾಜ್ಯಗಳ ಪೈಕಿ ಅನುಕ್ರಮವಾಗಿ ಮಹಾರಾಷ್ಟ್ರ (31,107 ಕಂಪನಿಗಳು), ಉತ್ತರ ಪ್ರದೇಶ (16,969) ದೆಹಲಿ (16,323) ಕರ್ನಾಟಕ (13,403), ತಮಿಳುನಾಡು (11,020) ಇವೆ.
ಉದ್ಯಮ ಮತ್ತು ಸೇವೆಗಳ ವಿಭಾಗದಲ್ಲಿ (44,168 ಕಂಪನಿಗಳು) ಉತ್ಪಾದನಾ ಕ್ಷೇತ್ರದಲ್ಲಿ (44,168 ಕಂಪನಿಗಳು) ಸಮುದಾಯ, ಸಾಮಾಜಿಕ ಕ್ಷೇತ್ರಕ್ಕೆ ಸಂಬಂಧಿಸಿದ 23,416 ಕಂಪನಿಗಳು ಕೃಷಿ ಮತ್ತು ಸಂಬಂಧಿಸಿದ ಚಟುವಟಿಕೆಗಳ 13,387 ಕಂಪನಿಗಳು ನೋಂದಣಿಯಾಗಿವೆ ಎಂದು ಸರ್ಕಾರಿ ಪ್ರಕಟಣೆಯ ಮೂಲಕ ತಿಳಿದುಬಂದಿದೆ.