ಏಪ್ರಿಲ್ 14 ಭಾರತೀಯರಿಗೆ ಅತ್ಯಂತ ಮಹತ್ವದ ದಿನ. ಭಾರತೀಯ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜನಿಸಿದ ದಿನ. ಪ್ರತಿ ವರ್ಷ ಈ ದಿನವನ್ನು ಅಂಬೇಡ್ಕರ್ ಜಯಂತಿ ಎಂದು ಆಚರಿಸಲಾಗುತ್ತದೆ. ಈ ಮೂಲಕ ಅವರು ಈ ದೇಶಕ್ಕೆ ನೀಡಿರುವ ಕೊಡುಗೆಗೆ ಸಣ್ಣ ಕೃತಜ್ಞತೆ ಸಲ್ಲಿಸಲಾಗುವುದು. ಈ ದಿನದ ಕುರಿತ ಮತಷ್ಟು ಮಾಹಿತಿ ಇಲ್ಲಿದೆ.
ಅಂಬೇಡ್ಕರ್ ಜಯಂತಿಯ ಇತಿಹಾಸ, ಮಹತ್ವ ಹಾಗೂ ಪ್ರಾಮುಖ್ಯತೆಯ ಬಗ್ಗೆ ಈ ಕೆಳಗೆ ನೀಡಲಾಗಿದೆ:
ಅಂಬೇಡ್ಕರ್ ಜಯಂತಿಯ ಇತಿಹಾಸ: ಬಾಬಾಸಾಹೇಬ್ ಅಂಬೇಡ್ಕರ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಭೀಮರಾವ್ ರಾಮ್ಜಿ ಅಂಬೇಡ್ಕರ್ ಸಾಮಾಜಿಕ ಸುಧಾರಕ ಮತ್ತು ಭಾರತೀಯ ಸಂವಿಧಾನ ಶಿಲ್ಪಿ. ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನವನ್ನು ಅಂಬೇಡ್ಕರ್ ಜಯಂತಿ ಎಂದು ಆಚರಿಸಲಾಗುತ್ತದೆ. ಅವರು ಏಪ್ರಿಲ್ 14, 1891 ರಂದು ಆಗಿನ ಮಧ್ಯ ಪ್ರಾಂತ್ಯದ ಈಗ ಮಧ್ಯಪ್ರದೇಶದ ಇಂದೋರ್ ಬಳಿಯ ಮೊಹೋದಲ್ಲಿ ಜನಿಸಿದರು. ಮೊದಲ ಬಾರಿಗೆ, ಕಾರ್ಯಕರ್ತ ಜನಾರ್ದನ್ ಸದಾಶಿವ್ ರಣಪಿಸೆ ಅವರು ಅಂಬೇಡ್ಕರ್ ಅವರ ಜನ್ಮದಿನವನ್ನು 14 ಏಪ್ರಿಲ್ 1928 ರಂದು ಪುಣೆಯಲ್ಲಿ ಸಾರ್ವಜನಿಕವಾಗಿ ಆಚರಿಸಿದರು. ಅಂದಿನಿಂದ, ಈ ದಿನವನ್ನು ಅಂಬೇಡ್ಕರ್ ಜಯಂತಿ ಅಥವಾ ಭೀಮ್ ಜಯಂತಿ ಎಂದು ಆಚರಿಸಲಾಗುತ್ತದೆ.
ಅಂಬೇಡ್ಕರ್ ಜಯಂತಿಯ ಮಹತ್ವ: ಡಾ ಬಿಆರ್ ಅಂಬೇಡ್ಕರ್ ಅವರು ಭಾರತಕ್ಕೆ ಸಂವಿಧಾನವನ್ನು ನೀಡಿದ್ದಲ್ಲದೆ, ದೇಶದ ಕೇಂದ್ರ ಬ್ಯಾಂಕಿಂಗ್ ಸಂಸ್ಥೆಯಾದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸಮಾಜ ಸುಧಾರಕ, ಅರ್ಥಶಾಸ್ತ್ರಜ್ಞ ಮತ್ತು ನ್ಯಾಯಶಾಸ್ತ್ರಜ್ಞರಾದ ಬಿ ಆರ್ ಅಂಬೇಡ್ಕರ್ ಅವರು ಭಾರತದಲ್ಲಿ ದಲಿತ ಬೌದ್ಧ ಚಳವಳಿಯ ಹಿಂದಿನ ಶಕ್ತಿಯಾಗಿದ್ದರು. ಅಂಬೇಡ್ಕರ್ ತಮ್ಮ ಜೀವನದುದ್ದಕ್ಕೂ ದೀನ ದಲಿತರಿಗಾಗಿ ಹೋರಾಡಿದಲ್ಲದೇ, ಲಿಂಗ ಸಮಾನತೆಯನ್ನು ಬಲವಾಗಿ ನಂಬಿದ್ದರು. ಅವರು ಶಿಕ್ಷಣದ ಮೂಲಕ ಮಹಿಳೆಯರ ಸಬಲೀಕರಣಕ್ಕಾಗಿ ಒತ್ತಾಯಿಸಿದರು ಮತ್ತು ಸಮಾಜದ ಎಲ್ಲ ಜನರಿಗೆ ಸಮಾನತೆಯನ್ನು ಖಾತ್ರಿಪಡಿಸಿಕೊಳ್ಳಲು ಜಾತಿ ಅಡೆತಡೆಗಳನ್ನು ತೆಗೆದುಹಾಖಲು ಶ್ರಮಿಸಿದರು. ದೀನ ದಲಿತರಿಗೆ ಶಿಕ್ಷಣವನ್ನು ತಲುಪುವಂತೆ ಮಾಡಲು ಮತ್ತು ಅವರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಅವರು ಒತ್ತು ನೀಡಿದರು. ಇಂತಹ ಕಾರ್ಯ ಮಾಡಿದ ಮಹಾನ್ ವ್ಯಕ್ತಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಈ ದಿನವನ್ನು ಆಚರಣೆ ಮಾಡಲಾಗುವುದು.
ಅಂಬೇಡ್ಕರ್ ಕುರಿತು ಆಸಕ್ತಿದಾಯ ವಿಚಾರಗಳು: ಬಾಬಾಸಾಹೇಬರ ವೈಯಕ್ತಿಕ ಗ್ರಂಥಾಲಯ "ರಾಜ್‌ಗಿರ್" ನಲ್ಲಿ 50,000 ಕ್ಕೂ ಹೆಚ್ಚು ಪುಸ್ತಕಗಳಿವೆ ಮತ್ತು ಇದು ವಿಶ್ವದ ಅತಿದೊಡ್ಡ ಖಾಸಗಿ ಗ್ರಂಥಾಲಯ ಎಂದು ಹೇಳಲಾಗಿದೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಸ್ವತಂತ್ರ ಭಾರತದ ಮೊದಲ ಕಾನೂನು ಮಂತ್ರಿಯಾಗಿಯೂ ಸೇವೆ ಸಲ್ಲಿಸಿದರು (1947-51). 1956 ರಲ್ಲಿ ಅವರ ಮರಣದ ಮೊದಲು, ಅಂಬೇಡ್ಕರ್ ನಾಗ್ಪುರದಲ್ಲಿ ನಡೆದ ಸಮಾರಂಭದಲ್ಲಿ ಸುಮಾರು 200,000 ಸಹವರ್ತಿ ದಲಿತರೊಂದಿಗೆ ಬೌದ್ಧ ಧರ್ಮಕ್ಕೆ ಮತಾಂತರಗೊಂಡರು. ಮಾರ್ಚ್ 31, 1990 ರಂದು ಅವರಿಗೆ ಮರಣೋತ್ತರವಾಗಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ಬಾರತ ರತ್ನವನ್ನು ನೀಡಲಾಯಿತು.