ಎರ್ನಾಕುಲಂ: ಭಯೋತ್ಪಾದಕ ಕೃತ್ಯ ಹಾಗೂ ಭಾರತ ಸರ್ಕಾರದ ವಿರುದ್ಧ ಯದ್ಧ ಸಾರಲು ನಿಷೇಧಿತ ಸಿಪಿಐ (ಮಾವೋವಾದಿ) ಭಯೋತ್ಪಾದಕ ಸಂಘಟನೆಯನ್ನು ಬಲಗೊಳಿಸುವ ಪಿತೂರಿಯಲ್ಲಿ ಭಾಗಿಯಾಗಿದ್ದ ಆರೋಪದಡಿ ಕರ್ನಾಟಕದ ಐವರು ಸೇರಿದಂತೆ 20 ಮಾವೋವಾದಿಗಳ ವಿರುದ್ಧ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದೆ.
ಚಿಕ್ಕಮಗಳೂರಿನ ಶ್ರೀಮತಿ ಬಿ.ಪಿ, ಸಾವಿತ್ರಿ ಮತ್ತು ಬಿ.ಜಿ. ಕೃಷ್ಣಮೂರ್ತಿ, ಬೆಂಗಳೂರಿನ ರಮೇಶ್ ಹಾಗೂ ಉಡುಪಿಯ ವಿಕ್ರಂ ಗೌಡ ಸೇರಿದಂತೆ ಒಟ್ಟಾರೆ 20 ಮಂದಿಯ ವಿರುದ್ಧ ಭಾರತೀಯ ದಂಡ ಸಂಹಿತೆ, ಶಸ್ತ್ರಾಸ್ತ್ರ ಕಾಯ್ದೆ ಹಾಗೂ ಕಾನೂನು ಬಾಹಿರ ಚಟುವಟಿಕೆಗಳ (ನಿಯಂತ್ರಣ) ಕಾಯ್ದೆ ಅಡಿ ದೋಷಾರೋಪ ಸಲ್ಲಿಕೆಯಾಗಿದೆ.
ಶಸ್ತ್ರಾಸ್ತ್ರ ತರಬೇತಿ, ಭಯೋತ್ಪಾದಕ ಕೃತ್ಯ ಹಾಗೂ ಭಾರತ ಸರ್ಕಾರದ ವಿರುದ್ಧ ಯುದ್ಧದ ಉದ್ದೇಶಕ್ಕಾಗಿ ನಿಷೇಧಿತ ಭಯೋತ್ಪಾದಕ ಸಂಘಟನೆಯನ್ನು ಬಲಗೊಳಿಸಲು 2016ರಲ್ಲಿ ಮಲಪ್ಪುರಂ ಜಿಲ್ಲೆಯ ನೀಲಂಬುರ ಅರಣ್ಯ ಪ್ರದೇಶದಲ್ಲಿ ಸಭೆ ಕರೆದಿದ್ದ ಆರೋಪದ ಮೇರೆಗೆ ಈ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ ಎಂದು ಎನ್‌ಐಎ ವಕ್ತಾರ ತಿಳಿಸಿದ್ದಾರೆ.
ಮೊದಲಿಗೆ 2017ರಲ್ಲಿ ಮಲಪ್ಪುರಂನ ಎಡಕ್ಕರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆ ಬಳಿಕ ಕೇರಳ ಎಟಿಎಸ್ ಈ ಪ್ರಕರಣದ ತನಿಖೆಯನ್ನು ಕೈಗೊಂಡಿತ್ತು. ಕಳೆದ ವರ್ಷದ ಆಗಸ್ಟ್‌ನಲ್ಲಿ ವಿಚಾರಣೆಯನ್ನು ಎನ್‌ಐಎ ಕೈಗೆತ್ತಿಕೊಂಡಿತ್ತು.