ನವದೆಹಲಿ: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಏ.21 ರಂದು ಅಹ್ಮದಾಬಾದ್ ಗೆ ಭೇಟಿ ನೀಡಲಿದ್ದು, ಗುಜರಾತ್ ಗೆ ಭೇಟಿ ನೀಡುತ್ತಿರುವ ಮೊದಲ ಪ್ರಧಾನಿಯಾಗಿದ್ದಾರೆ.
ಎರಡು ದಿನಗಳ ಕಾಲ ಗುಜರಾತ್ ನಲ್ಲಿ ಬೋರಿಸ್ ಪ್ರವಾಸ ಕೈಗೊಳ್ಳಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
ಭಾರತ-ಬ್ರಿಟನ್ ನಲ್ಲಿ ಪ್ರಮುಖ ಕೈಗಾರಿಕೆಗಳಲ್ಲಿ ಹೂಡಿಕೆಯ ಘೋಷಣೆಯೂ ಈ ಅವಧಿಯಲ್ಲಿ ನಿರೀಕ್ಷಿಸಲಾಗುತ್ತಿದೆ.
ಗುಜರಾತ್ ನಿಂದ ಏ.22 ರಂದು ಬೋರಿಸ್ ನವದೆಹಲಿಗೆ ತೆರಳಲಿದ್ದು, ಭಾರತ-ಬ್ರಿಟನ್ ರಕ್ಷಣಾ ಕಾರ್ಯತಂತ್ರ ಹಾಗೂ ರಾಜತಾಂತ್ರಿಕ, ಆರ್ಥಿಕ ಪಾಲುದಾರಿಕೆಯ ಕುರಿತು ಸಭೆ ಕೇಂದ್ರೀಕೃತವಾಗಿರಲಿದೆ.
ಉಭಯ ದೇಶಗಳ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ಜಾನ್ಸನ್ ತಮ್ಮ ಭಾರತ ಪ್ರವಾಸವನ್ನು ಪ್ರಚಲಿತ ಮುಕ್ತ ವ್ಯಾಪಾರ ಒಪ್ಪಂದ (ಎಫ್ ಟಿಎ) ಮಾತುಕತೆಗಳನ್ನೂ ನಡೆಸುವ ನಿರೀಕ್ಷೆ ಇದೆ.
ಭಾರತಕ್ಕೆ ನನ್ನ ಭೇಟಿ, ಉದ್ಯೋಗ ಸೃಷ್ಟಿ, ಆರ್ಥಿಕ ಬೆಳವಣಿಗೆ, ಇಂಧನ ಭದ್ರತೆ ಹಾಗೂ ರಕ್ಷಣೆ ಸೇರಿದಂತೆ ಉಭಯ ದೇಶಗಳ ಜನರಿಗೂ ನಿಜವಾಗಿ ಉಪಯುಕ್ತವಾಗಲಿರುವ ಸಂಗತಿಯ ಕುರಿತದ್ದಾಗಿರಲಿದೆ ಎಂದು ಜಾನ್ಸನ್ ತಮ್ಮ ಭೇಟಿಗೂ ಮುನ್ನ ಹೇಳಿದ್ದಾರೆ.