ನವದೆಹಲಿ: ಭಾರತ- ಅಮೆರಿಕ '2+2' ಸಚಿವರ ಮಟ್ಟದ ಮಾತುಕತೆಯ ನಾಲ್ಕನೇ ಆವೃತ್ತಿಯಲ್ಲಿ ಪಾಲ್ಗೊಳ್ಳಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇದೇ ತಿಂಗಳ 11 ರಿಂದ ನಾಲ್ಕು ದಿನಗಳ ಕಾಲ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ.
ರಕ್ಷಣಾ ಸಚಿವಾಲಯ ಶುಕ್ರವಾರ ಈ ವಿಷಯ ತಿಳಿಸಿದ್ದು, ವಾಷಿಂಗ್ಟನ್ ಡಿಸ್ ಪ್ರವಾಸದ ನಂತರ ಹವೈನಲ್ಲಿರುವ ಅಮೆರಿಕ ಇಂಡೋ- ಫೆಸಿಪಿಕ್ ಕಮಾಂಡ್ ಕೇಂದ್ರ ಕಚೇರಿಗೆ ರಾಜನಾಥ್ ಸಿಂಗ್ ಭೇಟಿ ನೀಡಲಿದ್ದಾರೆ ಎಂದು ಮಾಹಿತಿ ನೀಡಿದೆ.
ಏಪ್ರಿಲ್ 11 ರಂದು ವಾಷಿಂಗ್ಟನ್ ನಲ್ಲಿ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಮತ್ತು ರಾಜ್ಯ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರೊಂದಿಗೆ ರಾಜನಾಥ್ ಸಿಂಗ್ ಹಾಗೂ ವಿದೇಶಾಂಗ ಸಚಿವ ಎಸ್. ಜೈಶಂಕರ್ 2+2 ಮಾತುಕತೆ ನಡೆಸಲಿದ್ದಾರೆ. ಈ ಮಾತುಕತೆ ವೇಳೆ ದ್ವಿಪಕ್ಷೀಯ ಸಹಕಾರ ಬಲವರ್ಧನೆ ಕುರಿತಂತೆ ಚರ್ಚೆ ನಡೆಯಲಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಅಮೆರಿಕದ ರಕ್ಷಣಾ ಕಾರ್ಯದರ್ಶಿ ಆಸ್ಟಿನ್ ಅವರನ್ನು ಪೆಂಟಗಾನ್ ನಲ್ಲಿ ಪ್ರತ್ಯೇಕವಾಗಿ ರಾಜನಾಥ್ ಸಿಂಗ್ ಭೇಟಿ ಮಾಡಲಿದ್ದು, ರಕ್ಷಣಾ ಸಹಕಾರ ಕುರಿತಂತೆ ಚರ್ಚಿಸಲಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಜೈಶಂಕರ್ ಕೂಡಾ ಏಪ್ರಿಲ್ 11 ರಿಂದ 12ರವರೆಗೂ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರೀಂದಮ್ ಬಾಗ್ಚಿ ಗುರುವಾರ ತಿಳಿಸಿದರು.