ನವದೆಹಲಿ: ಪ್ರಮುಖ ಲಸಿಕೆ ತಯಾರಕ ಕಂಪನಿಗಳಾದ ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ(ಎಸ್‌ಐಐ) ಮತ್ತು ಭಾರತ್ ಬಯೋಟೆಕ್ ಶನಿವಾರ ತಮ್ಮ ಕೋವಿಡ್-19 ಲಸಿಕೆಗಳ ಬೂಸ್ಟರ್ ಡೋಸ್‌ನ ಬೆಲೆ ಕಡಿತಗೊಳಿಸಿದ್ದು, ಖಾಸಗಿ ಆಸ್ಪತ್ರೆಗಳಿಗೆ ಪ್ರತಿ ಡೋಸ್ 225 ರೂ.ಗೆ ಇಳಿಸಲು ನಿರ್ಧರಿಸಿವೆ.
"ಕೇಂದ್ರ ಸರ್ಕಾರದೊಂದಿಗಿನ ಚರ್ಚೆಯ ನಂತರ, ಖಾಸಗಿ ಆಸ್ಪತ್ರೆಗಳಿಗೆ ಕೋವಿಶೀಲ್ಡ್ ಲಸಿಕೆ ದರವನ್ನು ಪ್ರತಿ ಡೋಸ್‌ಗೆ 600 ರಿಂದ 225 ರೂಪಾಯಿಗಳಿಗೆ ಇಳಿಸಲು ಸೆರಂ ನಿರ್ಧರಿಸಿದೆ ಎಂದು ಘೋಷಿಸಲು ನಾವು ಸಂತೋಷಪಡುತ್ತೇವೆ" ಎಂದು ಎಸ್ಐಐ ಸಿಇಒ ಆದರ್ ಪೂನಾವಾಲ ಅವರು ಟ್ವೀಟ್ ಮಾಡಿದ್ದಾರೆ.
ಸೆರಂ ಇನ್‌ಸ್ಟಿಟ್ಯೂಟ್ ಕೋವಿಡ್-19 ವಿರುದ್ಧದ ತನ್ನ ಕೋವಿಶೀಲ್ಡ್ ಲಸಿಕೆಯ ಬೂಸ್ಟರ್ ಡೋಸ್ 600 ರೂಪಾಯಿ ಬೆಲೆ ನಿಗದಿಪಡಿಸಿರುವುದಾಗಿ ಎಂದು ಶುಕ್ರವಾರ ಹೇಳಿತ್ತು. ಇದೀಗ ಅದನ್ನು 225 ರೂಪಾಯಿಗೆ ಇಳಿಸಲಾಗಿದೆ.
ಭಾರತ್ ಬಯೋಟೆಕ್ ಸಹ-ಸಂಸ್ಥಾಪಕಿ, ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಸುಚಿತ್ರಾ ಎಲಾ ಅವರು ಸಹ ಈ ಕುರಿತು ಟ್ವೀಟ್ ಮಾಡಿದ್ದು, "ಎಲ್ಲಾ ವಯಸ್ಕರಿಗೆ ಬೂಸ್ಟರ್ ಡೋಸ್ ಲಭ್ಯವಾಗುವಂತೆ ಮಾಡುವ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ಕೇಂದ್ರ ಸರ್ಕಾರದೊಂದಿಗೆ ಸಮಾಲೋಚಿಸಿ, ನಾವು ಕೋವ್ಯಾಕ್ಸಿನ್ ಬೆಲೆಯನ್ನು ಖಾಸಗಿ ಆಸ್ಪತ್ರೆಗಳಿಗೆ 1,200 ರೂ.ಗಳಿಂದ 225 ರೂಪಾಯಿಗೆ ಕಡಿತಗೊಳಿಸಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ. ಈ ಮೂಲಕ ಎರಡೂ ಲಸಿಕೆಗಳ ಒಂದು ಡೋಸ್‌ಗೆ 225 ರೂ. ನಿಗದಿ ಪಡಿಸಲಾಗಿದೆ.