ಶ್ರೀನಗರ: ಪ್ರಧಾನಿ ನರೇಂದ್ರ ಮೋದಿ ಅವರು ಏ. 24ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲಿದ್ದು, ಈ ಸಂದರ್ಭದಲ್ಲಿ ತಮ್ಮ ಅವಧಿಯಲ್ಲಿ ಕೈಗೊಂಡ ಹಲವು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಹಾಗೂ ಸುಮಾರು ₹ 70 ಸಾವಿರ ಕೋಟಿ ಮೌಲ್ಯದ ಕೈಗಾರಿಕಾ ಹೂಡಿಕೆ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

2019ರ ಆಗಸ್ಟ್‌ನಲ್ಲಿ ವಿಶೇಷ ಸ್ಥಾನಮಾನ ತೆಗೆದುಹಾಕಿದ ಬಳಿಕ ಮೋದಿ ಅವರು ಇದೇ ಮೊದಲ ಬಾರಿಗೆ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡುತ್ತಿದ್ದಾರೆ.
ಕಿಶ್ತ್‌ವಾರ್ ಜಿಲ್ಲೆಯಲ್ಲಿ ಚೆನಾಬ್ ನದಿಯ ಮೇಲೆ ನಿರ್ಮಿಸಲಾಗುತ್ತಿರುವ ರಾಟ್ಲೆ ಮತ್ತು ಕ್ವಾರ್ ಜಲವಿದ್ಯುತ್ ಯೋಜನೆಗಳಿಗೆ ಶಂಕುಸ್ಥಾಪನೆ, ಪಲ್ಲಿ ಪಂಚಾಯ್ತಿಯಲ್ಲಿ ಸುಮಾರು ₹ 70 ಸಾವಿರ ಕೋಟಿ ವೆಚ್ಚದ ಕೈಗಾರಿಕಾ ಹೂಡಿಕೆಗಳಿಗೆ ಶಿಲಾನ್ಯಾಸ ಸಮಾರಂಭ ಹಾಗೂ ಬನಿಹಾಲ್- ಖಾಜಿಗುಂಡ್ ರಸ್ತೆ ಸುರಂಗ ಮಾರ್ಗದ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಮೋದಿ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜಮ್ಮು ಗಡಿಯ ಸಾಂಬಾ ಜಿಲ್ಲೆಯಲ್ಲಿ 450 ಮನೆಗಳಿರುವ ಪಲ್ಲಿ ಎನ್ನುವ ಕುಗ್ರಾಮವು ಇದೀಗ ಕೇಂದ್ರಾಡಳಿತ ಪ್ರದೇಶದ ಮೊದಲ ಇಂಗಾಲ ಮುಕ್ತ ಗ್ರಾಮವಾಗಿದೆ. ಏ. 24 ಪಂಚಾಯತ್ ರಾಜ್ ದಿನವಾಗಿದ್ದು, ಅಂದು ಮೋದಿ ಅವರು ಪಲ್ಲಿ ಪಂಚಾಯ್ತಿ ಸೇರಿದಂತೆ ದೇಶದ ಸುಮಾರು 700 ಪಂಚಾಯ್ತಿಗಳ ಒಂದು ಲಕ್ಷ ಜನರನ್ನು ಉದ್ದೇಶಿಸಿ ವರ್ಚುವಲ್ ಕಾರ್ಯಕ್ರಮದಲ್ಲಿ ಮಾತನಾಡಲಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಪ್ರಧಾನಿ ಅವರನ್ನು ಬರಮಾಡಿಕೊಳ್ಳಲಿದ್ದಾರೆ. ಭಾರತೀಯ ಸರ್ವೇಯರ್ ಜನರಲ್ ಮತ್ತು ಇತರ ಏಜೆನ್ಸಿಗಳ ಮೂಲಕ ಡ್ರೋನ್, ಜಿಯೋ ಟ್ಯಾಗಿಂಗ್ ಮೂಲಕ ಭೂ ಮ್ಯಾಪಿಂಗ್ ಮಾಡಿದ ನಂತರ ಸಿದ್ಧಪಡಿಸಿದ ಪುಸ್ತಕಗಳನ್ನು ತಮ್ಮ ಭೇಟಿಯ ವೇಳೆ ಮೋದಿ ಅವರು ರೈತರಿಗೆ ನೀಡಲಿದ್ದಾರೆ ಎಂದೂ ಮೂಲಗಳು ತಿಳಿಸಿವೆ.