HEALTH TIPS

ದಿಲ್ಲಿ ಘರ್ಷಣೆ, 25 ಮಂದಿ ಸೆರೆ: ವಿಎಚ್​ಪಿ, ಬಜರಂಗದಳ ವಿರುದ್ಧ ಪ್ರಕರಣ

              ದೇಶದ ವಿವಿಧ ರಾಜ್ಯಗಳಲ್ಲಿ ಶ್ರೀರಾಮನವಮಿ ಮತ್ತು ಹನುಮಾನ್ ಜಯಂತಿ ವೇಳೆ ಸಂಭವಿಸಿದ ಘರ್ಷಣೆ ಸಂಬಂಧ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಮಧ್ಯೆ, ಈ ಹಿಂಸಾಚಾರ ಪ್ರಕರಣದ ತನಿಖೆಯನ್ನು ಎನ್​ಐಎಗೆ ವಹಿಸಬೇಕು ಎಂದು ಕೋರಿ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಕೆ ಆಗಿದೆ.

                ಘರ್ಷಣೆ ಕುರಿತಂತೆ ಪ್ರತಿಪಕ್ಷಗಳು ನೀಡಿದ ಹೇಳಿಕೆಗೆ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ತಿರುಗೇಟು ನೀಡಿದ್ದಾರೆ.

               ವಾಯವ್ಯ ದೆಹಲಿಯ ಜಹಾಂಗೀರ್ ಪುರಿಯಲ್ಲಿ ಶನಿವಾರ ಹನುಮ ಜಯಂತಿ ಮೆರವಣಿಗೆ ವೇಳೆ ಸಂಭವಿಸಿದ ಕೋಮು ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಎರಡೂ ಧರ್ಮಕ್ಕೆ ಸೇರಿದ 25 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಜತೆಗೆ ಅನುಮತಿ ಇಲ್ಲದೆ ಮೆರವಣಿಗೆ ನಡೆಸಿದ ಆರೋಪದ ಮೇಲೆ ವಿಶ್ವಹಿಂದು ಪರಿಷದ್ (ವಿಎಚ್​ಪಿ) ಮತ್ತು ಬಜರಂಗ ದಳದ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಮಧ್ಯೆ, ಸೋಮವಾರ ಕೂಡ ಈ ಪ್ರದೇಶದಲ್ಲಿ ಕಲ್ಲು ತೂರಾಟ ನಡೆದಿದೆ. ಬಂಧಿತರಲ್ಲಿ ಎಂಟು ಮಂದಿ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದು, ಎಲ್ಲರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ದೆಹಲಿ ಪೊಲೀಸ್ ಕಮಿಷನರ್ ರಾಕೇಶ್ ಅಸ್ತಾನ ಹೇಳಿದ್ದಾರೆ.

             ಇಡೀ ಪ್ರಕರಣದ ಬಗ್ಗೆ ಅಪರಾಧ ತನಿಖಾ ದಳ ತನಿಖೆ ನಡೆಸುತ್ತಿದ್ದು, 14 ತಂಡಗಳನ್ನು ರಚಿಸಲಾಗಿದೆ. ನಾಲ್ಕು ವಿಧಿವಿಜ್ಞಾನ ತಂಡಗಳು ಅಪರಾಧ ಸ್ಥಳಗಳಿಗೆ ಭೇಟಿ ನೀಡಿ ಮಾದರಿಗಳನ್ನು ಸಂಗ್ರಹಿಸಿವೆ. ಸಿಸಿಟಿವಿ ದೃಶ್ಯಗಳು ಮತ್ತು ಡಿಜಿಟಲ್ ಮಾಧ್ಯಮಗಳ ವಿಶ್ಲೇಷಣೆಯನ್ನೂ ಮಾಡಲಾಗುತ್ತಿದೆ. ಕೆಲವರು ಸೋಷಿಯಲ್ ಮೀಡಿಯಾ ಮೂಲಕ ಶಾಂತಿ ಕದಡಲು ಪ್ರಯತ್ನಿಸುತ್ತಿದ್ದಾರೆ ಎಂದು ಅಸ್ತಾನಾ ತಿಳಿಸಿದ್ದಾರೆ. ಬಂಧಿತರಿಂದ ಐದು ಬಂದೂಕು, ಐದು ಕತ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರಲ್ಲಿ ಅಸ್ಲಾಂ ಎಂಬಾತ ದೆಹಲಿ ಪೊಲೀಸ್ ಸಬ್ ಇನ್ಸ್​ಪೆಕ್ಟರ್ ಮೆದಾಲಾಲ್ ಮೀನಾ ಮೇಲೆ ಗುಂಡು ಹಾರಿಸಿದ್ದಾನೆ. ಆತನಿಂದ ನಾಡಾ ಪಿಸ್ತೂಲ್​ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಹನುಮ ಜಯಂತಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವರು ಆಯುಧಗಳನ್ನು ಹಿಡಿದು ಮಸೀದಿಯನ್ನು ಧ್ವಂಸ ಮಾಡಲು ಯತ್ನಿಸಿದ್ದರು ಎಂದು ಕೆಲ ಮುಸ್ಲಿಮರು ಆರೋಪಿಸಿದ್ದಾರೆ. ಆದರೆ ಇದನ್ನು ರಾಕೇಶ್ ಅಸ್ತಾನ ನಿರಾಕರಿಸಿದ್ದಾರೆ.

ಸುಪ್ರೀಂಕೋರ್ಟ್​ಗೆ ಅರ್ಜಿ: ರಾಮನವಮಿ ಮತ್ತು ಹನುಮಾನ್ ಜಯಂತಿ ಸಂಭ್ರಮಾ ಚರಣೆ ವೇಳೆ ದೇಶದ ವಿವಿಧ ಕಡೆಗಳಲ್ಲಿ ಕಲ್ಲು ತೂರಾಟ ನಡೆಸಿದ ಘಟನೆಗಳ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್​ಐಎ) ತನಿಖೆಗೆ ಆದೇಶಿಸಬೇಕು ಎಂದು ಕೋರಿ ಸುಪ್ರೀಂಕೋರ್ಟ್​ಗೆ ವಿನೀತ್ ಜಿಂದಾಲ್ ಎಂಬ ವಕೀಲರು ಅರ್ಜಿ ಸಲ್ಲಿಸಿದ್ದಾರೆ. ಈ ಘಟನೆಗಳ ಹಿಂದೆ ಐಸಿಸ್ ಮತ್ತಿತರ ಉಗ್ರವಾದಿ ಸಂಘಟನೆಗಳ ಪರೋಕ್ಷ ನೆರವಿನ ಸಾಧ್ಯತೆ ಬಗ್ಗೆ ಅವರು ಅರ್ಜಿಯಲ್ಲಿ ದಾಖಲಿಸಿದ್ದಾರೆ.

              ವೆರವಾಲ್​ನಲ್ಲಿ 30 ಮಂದಿ ಬಂಧನ: ಗುಜರಾತ್ ಗಿರ್ ಸೋಮನಾಥ ಜಿಲ್ಲೆಯ ವೆರವಾಲ್​ನಲ್ಲಿ ಹನುಮ ಜಯಂತಿ ಮೆರವಣಿಗೆಯ ಸಾಗುತ್ತಿದ್ದ ವೇಳೆ ದರ್ಗಾ ಬಳಿ ಘರ್ಷಣೆ ನಡೆದಿದ್ದು, ಈ ಸಂಬಂಧ 30 ಮಂದಿಯನ್ನು ಬಂಧಿಸಲಾಗಿದೆ. ದರ್ಗಾ ಮೇಲೆ ಕೇಸರಿ ಧ್ವಜ ಹಾರಿಸಲು ಪ್ರಯತ್ನಿಸಲಾಯಿತು ಎಂದು ಆರೋಪಿಸಲಾಗಿದೆ. ಆದರೆ, ಮೆರವಣಿಗೆಯ ಮೇಲೆ ಅನ್ಯ ಕೋಮಿ ನವರು ಕಲ್ಲುತೂರಾಟ ನಡೆಸಿದರು ಎಂದು ದೂರು ದಾಖಲಾಗಿದೆ. ಪೊಲೀಸರು ಎರಡೂ ಗುಂಪುಗಳ ದೂರನ್ನು ದಾಖಲಿಸಿಕೊಂಡಿದ್ದಾರೆ.

              ಪ್ರತಿಪಕ್ಷಗಳ ವಿರುದ್ಧ ನಡ್ಡಾ ವಾಗ್ದಾಳಿ: ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಿಪಕ್ಷಗಳ ಜಂಟಿ ಹೇಳಿಕೆಗೆ ತೀಕ್ಷ್ಣ ಪ್ರತ್ಯುತ್ತರ ನೀಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ದೇಶದ ಆತ್ಮದ ಮೇಲೆ ವಿಪಕ್ಷಗಳು ನೇರ ಹಲ್ಲೆ ನಡೆಸಿವೆ ಮತ್ತು ಪರಿಶ್ರಮಿ ನಾಗರಿಕರ ಮೇಲೆ ವಿನಾಕಾರಣ ಆರೋಪಗಳನ್ನು ಮಾಡುತ್ತಿವೆ. ಕಳೆದ ಎಂಟು ವರ್ಷಗಳಲ್ಲಿ ದೇಶದ ರಾಜಕೀಯವು ಕ್ಷಿಪ್ರ ಪರಿವರ್ತನೆಗೆ ಒಳಗಾಗಿದೆ. ವೋಟ್ ಬ್ಯಾಂಕ್ ರಾಜಕೀಯ ಮತ್ತು ವಿಭಜಕ ರಾಜಕೀಯದ ಧೂಳಿನ ಮತ್ತು ತುಕ್ಕು ಹಿಡಿದ ವಿಧಾನವು ಇನ್ನು ಮುಂದೆ ಕಾರ್ಯನಿರ್ವಹಿಸುವುದಿಲ್ಲ ಎಂದು ದೇಶದ ನಾಗರಿಕರನ್ನು ಉದ್ದೇಶಿಸಿ ಬರೆದ ಪತ್ರದಲ್ಲಿ ದಾಖಲಿಸಿದ್ದಾರೆ. 1966ರ ನವೆಂಬರ್​ನಲ್ಲಿ, ಗೋಹತ್ಯೆ ನಿಷೇಧದ ಬೇಡಿಕೆಯೊಂದಿಗೆ ದೆಹಲಿಯತ್ತ ಮೆರವಣಿಗೆ ನಡೆಸಿದ ಹಿಂದು ಸಾಧುಗಳ ಮೇಲೆ ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರ ಸರ್ಕಾರ ಗುಂಡು ಹಾರಿಸಿತ್ತು. ಇಂದಿರಾ ಗಾಂಧಿಯವರ ಹತ್ಯೆ ಹಿನ್ನೆಲೆಯಲ್ಲಿ ಸಾವಿರಾರು ಸಿಖ್ಖರ ನರಮೇಧ ನಡೆಯಿತು ಇದನ್ನು ಸಮರ್ಥಿಸಿದ ರಾಜೀವ್ ಗಾಂಧಿಯವರ ಕುಖ್ಯಾತ ಮಾತುಗಳನ್ನು ಯಾರೂ ಮರೆಯಲು ಸಾಧ್ಯವಿಲ್ಲ ಎಂದ ನಡ್ಡಾ, ಕಾಂಗ್ರೆಸ್ ಆಡಳಿತದಲ್ಲಿ ನಡೆದ ಕೋಮುಗಲಭೆಯ ಪಟ್ಟಿ ದೊಡ್ಡದಿದೆ ಎಂದಿದ್ದಾರೆ.

            ಅಮರಾವತಿಯಲ್ಲಿ ಕರ್ಫ್ಯೂ: ಮಹಾರಾಷ್ಟ್ರದ ಅಮರಾವತಿ ಗ್ರಾಮಾಂತರ ಭಾಗದ ಅಚಲಪುರ ಮತ್ತು ಪರತ್ವಾಡದಲ್ಲಿ ಭಾನುವಾರ ಸಂಜೆ ಸಂಭವಿಸಿದ ಗಲಭೆ ಹಿನ್ನೆಲೆಯಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಭಾನುವಾರ ಸಂಜೆ 6 ಗಂಟೆ ಸುಮಾರಿಗೆ ಅಲ್ಪ ಸಂಖ್ಯಾತ ಸಮುದಾಯದ ಮಂದಿ ವಾಸಿಸುವ ದುಲ್ಹಾ ಗೇಟ್ ಪ್ರದೇಶದಲ್ಲಿ ವ್ಯಕ್ತಿಯೊಬ್ಬರು ಕೇಸರಿ ಧ್ವಜ ಹಾರಿಸಿದರು. ಇದರಿಂದ ಎರಡೂ ಸಮುದಾಯದ ಮಧ್ಯೆ ಕಲ್ಲು ತೂರಾಟ ನಡೆದಿದೆ. ಪೊಲೀಸರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

              ವಡೋದರಾದಲ್ಲೂ ಗಲಭೆ: ಗುಜರಾತ್​ನ ವಡೋದರದ ಹಳೆಯ ನಗರ ದಲ್ಲಿ ರಸ್ತೆ ಅಪಘಾತ ಪ್ರಕರಣದ ಶುರು ವಾದ ಜಗಳ ಕೋಮು ಹಿಂಸಾಚಾರಕ್ಕೆ ತಿರುಗಿ ಕನಿಷ್ಠ ಮೂವರು ಗಾಯಗೊಂಡಿದ್ದಾರೆ. ಗಲಭೆಗೆ ಸಂಬಂಧಿಸಿ ಪೊಲೀಸರು 19 ಮಂದಿಯನ್ನು ಬಂಧಿಸಿದ್ದಾರೆ. ದ್ವಿಚಕ್ರ ವಾಹನ ಮಾಲೀಕರ ನಡುವಿನ ವಾಗ್ವಾದದಿಂದ ವಿವಾದ ಉಲ್ಬಣಗೊಂಡು ಎರಡೂ ಸಮುದಾಯಗಳ ಜನರು ಮಧ್ಯೆ ಜಗಳ ಆರಂಭವಾಗಿ ಕಲ್ಲು ತೂರಾಟ ನಡೆಯಿತು.

               ಗಾಯಾಳು ಮರಣ: ಮಧ್ಯಪ್ರದೇಶದ ಖಗೋನ್​ನಲ್ಲಿ ರಾಮನವಮಿ ಮೆರವಣಿಗೆ ಸಾಗುತ್ತಿದ್ದ ವೇಳೆ ಉಂಟಾದ ಹಿಂಸಾಚಾರ ಘಟನೆಯಲ್ಲಿ ಗಾಯಗೊಂಡಿದ್ದ ಇಬ್ರಿಸ್ ಖಾನ್ ಎಂಬಾತ 8 ದಿನಗಳ ನಂತರ ಮೃತಪಟ್ಟಿದ್ದಾನೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries