ಕಿಯೆವ್/ಮಾಸ್ಕೊ: ರಷ್ಯಾ ಸೈನಿಕರು ಸ್ವಾಧೀನ ಪಡಿಸಿಕೊಂಡಿದ್ದ ರಾಜಧಾನಿ ಕಿಯೆವ್ ಬಳಿಯ ಹಲವು ಪ್ರದೇಶಗಳನ್ನು ಯೂಕ್ರೇನ್ ಸೇನೆ ಮರುವಶಕ್ಕೆ ಪಡೆದಿದೆ. ತಮ್ಮನ್ನು ಬಲೆಗೆ ಬೀಳಿಸಲು ರಷ್ಯಾದ ಸೈನಿಕರು ಹೂಡಿದ್ದ ತಂತ್ರಕ್ಕೆ ಪ್ರತಿತಂತ್ರ ಮಾಡಿದ ಯೂಕ್ರೇನ್ ಪಡೆಗಳು, ರಸ್ತೆಗಳಲ್ಲಿ ಬಿದ್ದಿದ ನಾಗರಿಕರ ಶವಗಳನ್ನು ಕೇಬಲ್ ಮೂಲಕ ಎಳೆದರು.
ಹುಶಾರಾಗಿ ಮುಂದಡಿ ಇಟ್ಟು, ಪಟ್ಟಣವನ್ನು ಮರುವಶಕ್ಕೆ ಪಡೆದರು ಎಂದು ಮೂಲಗಳು ತಿಳಿಸಿವೆ. ಈ ಮಧ್ಯೆ, ಬುಚಾ ನಗರದಲ್ಲಿ 300ಕ್ಕೂ ಹೆಚ್ಚು ನಾಗರಿಕರು ಮೃತಪಟ್ಟಿದ್ದಾರೆ. ಇದು ಉದ್ದೇಶಪೂರ್ವಕ ಹತ್ಯೆ ಎಂದು ಯೂಕ್ರೇನ್ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಹೇಳಿದ್ದಾರೆ. ಪುರುಷರು ಮತ್ತು ಮಹಿಳೆಯರ ಕೈಗಳನ್ನು ಕಟ್ಟಿಹಾಕಿ ಗುಂಡಿಟ್ಟು ಕೊಲ್ಲಲಾಗಿದೆ. ಇದು ನಾಜಿಗಳು ಮಾಡಿದ ಹತ್ಯೆಗಿಂತ ಕ್ರೂರ ಎಂದು ಟ್ವೀಟ್ ಮಾಡಿದ್ದಾರೆ. ರಷ್ಯಾ ಪಡೆಗಳ ಈ ಹೇಯದಾಳಿಯನ್ನು ಐರೋಪ್ಯ ಒಕ್ಕೂಟ, ಬ್ರಿಟನ್ಗಳು ತೀವ್ರವಾಗಿ ಖಂಡಿಸಿವೆ.
ರಷ್ಯಾದಲ್ಲಿ ಔಷಧ ಕೊರತೆ: ಪಾಶ್ಚಿಮಾತ್ಯ ದೇಶಗಳು ನಿರ್ಬಂಧ ವಿಧಿಸಿರುವ ಕಾರಣ ಪೂರೈಕೆ ಜಾಲದಲ್ಲಿ ಅಡಚಣೆ ಉಂಟಾಗಿರುವ ಹಿನ್ನೆಲೆಯಲ್ಲಿ ರಷ್ಯಾದಲ್ಲಿ ಅತ್ಯಾವಶ್ಯಕ ಔಷಧಗಳ ಕೊರತೆ ಎದುರಾಗಿದೆ. ಕೆಲವೊಂದು ಔಷಧಗಳು ರಾಜಧಾನಿ ಮಾಸ್ಕೊ ಮತ್ತು ಇತರ ಪ್ರಮುಖ ನಗರಗಳಲ್ಲೂ ಲಭ್ಯವಿಲ್ಲ ಎಂದು ಎಪಿ ಸುದ್ದಿಸಂಸ್ಥೆ ವರದಿ ಮಾಡಿದೆ. ಯೂಕ್ರೇನ್ ವಿರುದ್ಧ ಯುದ್ಧ ಹೂಡಿ ದೇಶವನ್ನು ಸಂಕಷ್ಟಕ್ಕೆ ಸಿಲುಕಿಸಲಾಗಿದೆ ಎಂದು ರಷ್ಯಾದ ಅನೇಕ ಪಟ್ಟಣಗಳಲ್ಲಿ ಪ್ರತಿಭಟನೆಗಳು ವ್ಯಕ್ತವಾಗಿವೆ.
ಬಂದರಿನ ಮೇಲೆ ಬಾಂಬ್ ದಾಳಿ: ಯೂಕ್ರೇನ್ನ ಒಡೆಸ್ಸಾ ನಗರ ಬಂದರಿನ ಮೇಲೆ ರಷ್ಯಾ ಪಡೆಗಳು ಬಾಂಬ್ ದಾಳಿ ನಡೆಸಿವೆ. ದಕ್ಷಿಣದಲ್ಲಿರುವ ತಮ್ಮ ಸೇನೆಯನ್ನು ಸಂರ್ಪಸಲು ಈ ಬಂದರನ್ನು ವಶಪಡಿಸಿಕೊಳ್ಳುವ ಉದ್ದೇಶದಿಂದ ಈ ದಾಳಿ ನಡೆಸಿದೆ. ಕಪುಪ ಸಮುದ್ರದಲ್ಲಿ ಯೂಕ್ರೇನಿನ ಅತಿ ದೊಡ್ಡ ಬಂದರು ಇದಾಗಿದ್ದು, ದಾಳಿಯಿಂದ ಭಾರಿ ಹಾನಿ ಆಗಿದೆ. ಆದರೆ ಸಾವು-ನೋವಿನ ಬಗ್ಗೆ ಇನ್ನು ವರದಿಯಾಗಿಲ್ಲ. ಯೂಕ್ರೇ ನ್ನ ಉತ್ತರ ಭಾಗದಲ್ಲಿ ಸೇನೆ ಹಿಂಪಡೆಯುವುದಾಗಿ ರಷ್ಯಾ ಘೋಷಿಸಿದ ಬಳಿಕ ದಕ್ಷಿಣದಲ್ಲಿ ಭಾರಿ ದಾಳಿ ನಡೆಸಿದೆ. ಈ ಮಧ್ಯೆ, ಶಾಂತಿ ಮಾತುಕತೆಗೆ ಪ್ರಯತ್ನಗಳು ನಡೆಯುತ್ತಿವೆಯಾದರೂ ಯಾವುದೂ ಫಲಪ್ರದವಾಗಿಲ್ಲ.
- ಯೂಕ್ರೇನ್-ರಷ್ಯಾ ಮಧ್ಯೆ ಶಾಂತಿ ಮಾತುಕತೆಗೆ ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸು ವುದಾದರೆ ಅದನ್ನು ಸ್ವಾಗತಿಸುವುದಾಗಿ ಅಮೆರಿಕದ ಸಂಸದೆ ಕ್ಯಾರೊಲಿನ್ ಮಲೋನಿ ಹೇಳಿದ್ದಾರೆ, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ರನ್ನು ಕೂಡಲೇ ಬಂಧಿಸಲು ವಾರಂಟ್ ನೀಡುವಂತೆ ಯುದ್ಧಾಪರಾಧಗಳ ಪ್ರಾಸಿಕ್ಯೂಟರ್ ಕಾರ್ಲಾ ಡೆಲ್ ಪಾಂಟ್ ಅಂತಾರಾಷ್ಟ್ರೀಯ ನ್ಯಾಯಾಲಯವನ್ನು ಒತ್ತಾಯಿಸಿದ್ದಾರೆ.
- ಎನಹೋರ್ಡರ್ ಪಟ್ಟಣದಲ್ಲಿ ಶಾಂತಿ ಯುತವಾಗಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ ರಷ್ಯಾ ಯೋಧರು ಗುಂಡಿನ ದಾಳಿ ನಡೆಸಿರುವುದನ್ನು ಯೂಕ್ರೇನ್ನ ಮಾನವ ಹಕ್ಕುಗಳ ಒಂಬುಡ್ಸ್ಮನ್ ಖಂಡಿಸಿದ್ದಾರೆ, ಇನ್ನು ಮುಂದೆ ರಷ್ಯಾದಿಂದ ನೈಸರ್ಗಿಕ ಅನಿಲವನ್ನು ಆಮದು ಮಾಡಿಕೊಳ್ಳುವುದಿಲ್ಲ ಎಂದು ಬಾಲ್ಟಿಕ್ ಹೇಳಿದೆ.