ಜಮ್ಮು-ಕಾಶ್ಮೀರ: ಉಗ್ರರ ಬೆದರಿಕೆಯ ಹೊರತಾಗಿಯೂ, ಕಾಶ್ನೀರದಿಂದ ವಲಸೆ ಹೋಗಿದ್ದ ಕಾಶ್ಮೀರಿ ಮಾತನಾಡುವ ಹಿಂದೂ ಪಂಡಿತರು ಸಂವಿಧಾನದ 370ನೇ ವಿಧಿ ರದ್ದತಿ ನಂತರ ಅಪಾರ ಪ್ರಮಾಣದಲ್ಲಿ ಕಣಿವೆ ಪ್ರದೇಶಕ್ಕೆ ಮರಳುತ್ತಿದ್ದಾರೆ.
ನಾಲ್ವರು ಕಾಶ್ಮೀರಿ ಪಂಡಿತರ ಕೊಲೆ ಸೇರಿದಂತೆ ಅಲ್ಪಸಂಖ್ಯಾತ ಸಮುದಾಯಗಳ ಸದಸ್ಯರು, ವಲಸೆ ಕಾರ್ಮಿಕರ ಮೇಲೆ ಉಗ್ರರ ಹಲ್ಲೆಯ ಹೊರತಾಗಿಯೂ ಸುಮಾರು 2,100 ಪಂಡಿತರು ಕಾಶ್ಮೀರಕ್ಕೆ ಹಿಂತಿರುಗಿದ್ದಾರೆ.
ಕಾಶ್ಮೀರದಲ್ಲಿ ರಕ್ತದೋಕುಳಿ ಸಂಭವಿಸಿದಾಗ ಸುಮಾರು 55,000 ಪಂಡಿತ ಕುಟುಂಬಗಳು 1990ರಲ್ಲಿ ತಮ್ಮ ಪುರಾತನ ಮನೆಗಳನ್ನು ತೊರೆದು ಜಮ್ಮು ಮತ್ತಿತರ ಕಡೆಗಳಿಗೆ ವಲಸೆ ಹೋಗಿದ್ದರು.
2021-21ರಲ್ಲಿ ವಿವಿಧ ಇಲಾಖೆಗಳಲ್ಲಿ 841 ಕಾಶ್ಮೀರಿ ಪಂಡಿತರನ್ನು ಸರ್ಕಾರ ನೇಮಕ ಮಾಡಿಕೊಳ್ಳುವ ಮೂಲಕ ಅವರು ವಾಪಸ್ ಆಗಲು ಸರ್ಕಾರ ಪ್ರೋತ್ಸಾಹ ನೀಡುತ್ತಿದೆ, 2021-22 ರಲ್ಲಿ 1,264 ಕಾಶ್ಮೀರಿ ಪಂಡಿತರನ್ನು ನೇಮಕಾತಿ ಮಾಡಿಕೊಳ್ಳಲಾಗಿದೆ.
2015ರ ಪ್ರಧಾನ ಮಂತ್ರಿ ಅಭಿವೃದ್ಧಿ ಪ್ಯಾಕೇಜ್ ಅಡಿಯಲ್ಲಿ 3000 ಸರ್ಕಾರಿ ಉದ್ಯೋಗಗಳನ್ನು ವಲಸೆ ಹೋಗಿರುವ ಕಾಶ್ಮೀರಿ ಪಂಡಿತರಿಗಾಗಿ ನೀಡಲಾಗಿತ್ತು. ಈವರೆಗೂ 2,828 ವಲಸಿರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದ್ದು, 1,913 ಮಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ. ಇನ್ನೂ 915 ಮಂದಿಯ ದಾಖಲೆಗಳ ಪರಿಶೀಲನೆ ಕಾರ್ಯ ನಡೆಯಬೇಕಿದೆ.