ನವದೆಹಲಿ :ಒಂದೇ ವರ್ಷದಲ್ಲಿ ದೇಶದ ನ್ಯಾಯಾಂಗದ ಅತ್ಯುನ್ನತ ಹುದ್ದೆಯನ್ನು ಒಬ್ಬರಿಗಿಂತ ಹೆಚ್ಚು ನ್ಯಾಯಮೂರ್ತಿಗಳು ಅಲಂಕರಿಸಿರುವ ಸಾಕಷ್ಟು ನಿದರ್ಶನಗಳು ನ್ಯಾಯಾಂಗ ಇತಿಹಾಸದಲ್ಲಿವೆ. ಆದರೆ 2022 ಮಾತ್ರ ವಿಶೇಷ ಎನಿಸಲಿದ್ದು, ಈ ವರ್ಷದ ಮೂರು ತಿಂಗಳಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಹುದ್ದೆಯನ್ನು ಮೂವರು ಅಲಂಕರಿಸಲಿದ್ದಾರೆ.
1991ರಲ್ಲಿ ಮೂರು ತಿಂಗಳ ಅವಧಿಯಲ್ಲಿ ಮೂವರು ನ್ಯಾಯಮೂರ್ತಿಗಳು ಅತ್ಯುನ್ನತ ಹುದ್ದೆ ಅಲಂಕರಿಸಿದ್ದು ಹೊರತುಪಡಿಸಿದರೆ ಇಂಥ ನಿದರ್ಶನ ಇದೇ ಮೊದಲು.
ಹಾಲಿ ಸಿಜೆಐ ಎನ್.ವಿ.ರಮಣ ತಮ್ಮ 16 ತಿಂಗಳ ಅಧಿಕಾರಾವಧಿ ಬಳಿಕ ಆಗಸ್ಟ್ 26ರಂದು ನಿವೃತ್ತರಾಗುವರು. ಬಳಿಕ ಮುಖ್ಯ ನ್ಯಾಯಮೂರ್ತಿ ಹುದ್ದೆಯನ್ನು ಉದಯ್ ಯು ಲಲಿತ್ ಅಲಂಕರಿಸುವರು. ಆದರೆ ಇವರ ಅಧಿಕಾರಾವಧಿ ಕೇವಲ ಎರಡು ತಿಂಗಳು ಮಾತ್ರ ಇರುತ್ತದೆ. ನವೆಂಬರ್ 8ರಂದು ಅವರು ನಿವೃತ್ತರಾಗಲಿದ್ದು, ನ್ಯಾಯಮೂರ್ತಿ ಧನಂಜಯ ವೈ ಚಂದ್ರಚೂಡ್ ಅವರಿಗೆ ದಾರಿ ಮಾಡಿಕೊಡಲಿದ್ದಾರೆ. ನ್ಯಾಯಮೂರ್ತಿ ಚಂದ್ರಚೂಡ್ ಅವರು ಮುಂದಿನ ಎರಡು ವರ್ಷ ಅವಧಿಗೆ ದೇಶದ ಸಿಜೆಐ ಆಗಿರುತ್ತಾರೆ.
ಇಷ್ಟೊಂದು ಕ್ಷಿಪ್ರವಾಗಿ ಅಂದರೆ 76 ದಿನಗಳ ಅವಧಿಯಲ್ಲಿ ಮೂವರು ಮುಖ್ಯ ನ್ಯಾಯಮೂರ್ತಿಗಳನ್ನು ದೇಶ ಕಾಣುತ್ತಿರುವ ಎರಡನೇ ನಿದರ್ಶನ ಇದು.
ಈ ಮುನ್ನ 1991ರ ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಮೂವರು ನ್ಯಾಯಮೂರ್ತಿಗಳು ಅತ್ಯುನ್ನತ ಹುದ್ದೆ ಅಲಂಕರಿಸಿದ್ದರು. ನ್ಯಾಯಮೂರ್ತಿ ರಂಗನಾಥ್ ಮಿಶ್ರಾ 1991ರ ನವೆಂಬರ್ 24ರಂದು ನಿವೃತ್ತರಾಗಿದ್ದರು. ಬಳಿಕ ನ್ಯಾಯಮೂರ್ತಿ ಕಮಲ್ ನಾರಾಯಣ್ ಸಿಂಗ್ ಸಿಜೆಐ ಆಗಿ ಅಧಿಕಾರ ವಹಿಸಿಕೊಂಡಿದ್ದು, ನವೆಂಬರ್ 25ರಿಂದ ಡಿಸೆಂಬರ್ 12ರವರೆಗೆ ಅಧಿಕಾರದಲ್ಲಿದ್ದರು. ಇದು ದೇಶದಲ್ಲಿ ಮುಖ್ಯ ನ್ಯಾಯಮೂರ್ತಿಗಳ ಅತ್ಯಂತ ಕಡಿಮೆ ಅಧಿಕಾರಾವಧಿ ಎನಿಸಿಕೊಂಡಿದೆ. ಬಳಿಕ ಡಿಸೆಂಬರ್ 13ರಂದು ನ್ಯಾಯಮೂರ್ತಿ ಎಂ.ಕೆ.ಕನಿಯಾ ಅವರು ಅಧಿಕಾರ ವಹಿಸಿಕೊಂಡು 1992ರ ನವೆಂಬರ್ 17ರವರೆಗೆ ಈ ಹುದ್ದೆಯಲ್ಲಿದ್ದರು.
ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ಜ್ಯೇಷ್ಠತೆ ಆಧಾರದಲ್ಲಿ ಸಿಜೆಐ ಹುದ್ದೆ ಪಡೆಯುತ್ತಾರೆ. ಸಿಜೆಐ ಅವರ ಅಧಿಕಾರಾವಧಿಯನ್ನು ನಿಗದಿಪಡಿಸಿಲ್ಲ. ಸಂವಿಧಾನದ ಪ್ರಕಾರ, ಈ ಅತ್ಯುನ್ನತ ಹುದ್ದೆಯಲ್ಲಿರುವವರ ನಿವೃತ್ತಿ ವಯಸ್ಸು 65 ಆಗಿರುತ್ತದೆ.