ನವದೆಹಲಿ: ಮುಂದಿನ 5 ರಿಂದ 6 ದಿನಗಳಲ್ಲಿ ದೇಶದಲ್ಲಿ ಬೇಸಿಗೆ ಧಗೆ ಏರಲಿದ್ದು, ಗರಿಷ್ಠ ತಾಪಮಾನವು 40 ರಿಂದ 42 ಡಿಗ್ರಿಗಳಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ದೆಹಲಿ-ಎನ್‌ಸಿಆರ್ ನಲ್ಲಿ ಶಾಖದ ಅಲೆ ತೀವ್ರಗೊಳ್ಳುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಇನ್ನು ತಾಪಮಾನವು ಶನಿವಾರದಿಂದ ಸೋಮವಾರದವರೆಗೆ (ಏಪ್ರಿಲ್ 9 ರಿಂದ 11 ರವರೆಗೆ) ಸುಮಾರು 42 ಡಿಗ್ರಿ ತಲುಪುವ ಸಾಧ್ಯತೆಯಿದೆ ಎಂದು ಐಎಂಡಿ ತಿಳಿಸಿದೆ.
ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಗುರುವಾರ ಗರಿಷ್ಠ ತಾಪಮಾನವು 40 ಡಿಗ್ರಿಗಳಷ್ಟಿದ್ದು, ದೆಹಲಿಯಲ್ಲಿ ಕನಿಷ್ಠ ತಾಪಮಾನವು 19.4 ಡಿಗ್ರಿ ಸೆಲ್ಸಿಯಸ್‌ನಲ್ಲಿ ದಾಖಲಾಗಿದೆ, ಈ ಋತುವಿನಲ್ಲಿ ಸಾಮಾನ್ಯವಾಗಿದೆ.
ಏತನ್ಮಧ್ಯೆ, ಗುರುವಾರ ಬೆಳಿಗ್ಗೆ 10 ಗಂಟೆಗೆ ಗಾಳಿಯ ಗುಣಮಟ್ಟ ಸೂಚ್ಯಂಕವು 265 ರಷ್ಟಿದ್ದ ಕಾರಣ ಗಾಳಿಯ ಗುಣಮಟ್ಟವು “ಕಳಪೆ” ವಿಭಾಗದಲ್ಲಿ ನಿಂತಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಂಕಿಅಂಶಗಳು ತೋರಿಸಿವೆ.
ಕಳೆದ 24 ಗಂಟೆಗಳಲ್ಲಿ ಒಡಿಶಾದ ಏಳು ಸ್ಥಳಗಳಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನ ದಾಖಲಾಗಿದೆ. ಬಲಂಗೀರ್ ಗರಿಷ್ಠ ತಾಪಮಾನ 41.8 ಡಿಗ್ರಿ ಸೆಲ್ಸಿಯಸ್ ನಷ್ಟಿದ್ದು, ಇದು ದೇಶದಲ್ಲಿ ದಾಖಲಾದ ಅತ್ಯಂತ ಹೆಚ್ಚಿನ ತಾಪಮಾನ ಪೀಡಿತ ಸ್ಥಳವಾಗಿದೆ.
ಉಳಿದಂತೆ ಆಂಧ್ರ ಪ್ರದೇಶದ ರಾಯಲಸೀಮೆ ಪ್ರಾಂತ್ಯ, ಕರ್ನಾಟಕದ ರಾಯಚೂರಿನಲ್ಲಿ ಹೆಚ್ಚಿನ ತಾಪಮಾನ ದಾಖಲಾಗುವ ಸಾಧ್ಯತೆ ಇದೆ ಎಂದು ಹೇಳಿದೆ.