ಕೊಲಂಬೊ : ಆರ್ಥಿಕ ಸಂಕಷ್ಟ ಮತ್ತು ಡೀಸೆಲ್ ಕೊರತೆಯಿಂದ ನಲುಗಿರುವ ನೆರೆಯ ಶ್ರೀಲಂಕಾಗೆ ಭಾರತ ಮತ್ತೆ ನೆರವಿನ ಹಸ್ತ ಚಾಚಿದೆ. 40,000 ಮೆಟ್ರಿಕ್ ಟನ್ ನಷ್ಟು ಪ್ರಮಾಣದ ಡೀಸೆಲ್ ಅನ್ನು ಭಾರತ ಶ್ರೀಲಂಕಾಗೆ ರವಾನಿಸಿದ್ದು, ಇದೀಗ ಸರಕು ಕೊಲಂಬೊ ತಲುಪಿದೆ.
ಶ್ರೀಲಂಕಾದಲ್ಲಿ 13 ಗಂಟೆಗಳ ಪವರ್ ಕಟ್ ಘೋಷಿಸಲಾಗಿದ್ದು ಈ ಪ್ರಮಾಣದ ವಿದ್ಯುತ್ ಅಭಾವವನ್ನು ದೇಶವು 1996ರಿಂದಲೂ ಎದುರಿಸಿರಲಿಲ್ಲ. ಭಾರತ ಕಳಿಸಿರುವ ಡೀಸೆಲ್ ನಿಂದಾಗಿ ಪವರ್ ಕಟ್ ಅವಧಿ ಇಳಿಕೆಯಾಗುವುದಾಗಿ ಅಧಿಕಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಇತ್ತೀಚಿಗಷ್ಟೆ ಭಾರತ 100 ಕೋಟಿ ಡಾಲರ್ ಹಣದ ನೆರವನ್ನು ಶ್ರೀಲಂಕಾಗೆ ನೀಡಿತ್ತು. ಅಲ್ಲದೆ ಅಗತ್ಯ ಬಿದ್ದಲ್ಲಿ ಅದಕ್ಕೂ ಹೆಚ್ಚಿನ ಆರ್ಥಿಕ ನೆರವು ನೀಡುವಲ್ಲಿ ಭಾರತ ಬದ್ಧವಾಗಿದೆ ಎಂದು ಭಾರತ ಘೋಷಿಸಿತ್ತು. ಶ್ರೀಲಂಕಾ ಕಷ್ಟಕರ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ನಾಗರಿಕರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.