ನವದೆಹಲಿ: ರಣಬಿಸಿಲ ಧಗೆಗೆ ರಾಜಧಾನಿ ದೆಹಲಿ ತತ್ತರಿಸಿ ಹೋಗಿದ್ದು, ಬುಧವಾರ ದೆಹಲಿಯಲ್ಲಿ ಬರೊಬ್ಬರಿ 46 ಡಿಗ್ರಿ ತಾಪಮಾನ ದಾಖಲಾಗಿದೆ.
ನಿನ್ನೆ 43 ಡಿಗ್ರಿ ತಾಪಮಾನ ಇದ್ದ ದೆಹಲಿಯಲ್ಲಿ 24 ಗಂಟೆಗಳ ಅವಧಿಯಲ್ಲಿ ಬರೊಬ್ಬರಿ 3 ಡಿಗ್ರಿ ತಾಪಮಾನ ಏರಿಕೆಯಾಗಿ 46 ಡಿಗ್ರಿಗೆ ತಲುಪಿದೆ. ಆ ಮೂಲಕ ದೆಹಲಿಯಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ದೆಹಲಿಯ ಸಫ್ದರ್‌ಜಂಗ್ ವೀಕ್ಷಣಾಲಯವು ಮಂಗಳವಾರ ಗರಿಷ್ಠ 40.8 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ದಾಖಲಿಸಿತ್ತು. ಇದು ಬುಧವಾರದಂದು 42 ಡಿಗ್ರಿ ಮಾರ್ಕ್ ಅನ್ನು ಮೀರುವ ನಿರೀಕ್ಷೆಯಿದೆ ಮತ್ತು ಗುರುವಾರದ ವೇಳೆಗೆ 44 ಡಿಗ್ರಿ ಸೆಲ್ಸಿಯಸ್‌ಗೆ ಏರುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
ದೆಹಲಿಯ ಕೆಲವು ಭಾಗಗಳಲ್ಲಿ ಗರಿಷ್ಠ ತಾಪಮಾನವು 46 ಡಿಗ್ರಿ ಸೆಲ್ಸಿಯಸ್‌ಗೆ ಏರಬಹುದು ಎಂದು ಹವಾಮಾನ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಹಿಂದೆ ಏಪ್ರಿಲ್ 21, 2017 ರಂದು ರಾಜಧಾನಿಯಲ್ಲಿ ಗರಿಷ್ಠ ತಾಪಮಾನ 43.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಅಂತೆಯೇ ಏಪ್ರಿಲ್ 29, 1941 ರಂದು ತಿಂಗಳ ಸಾರ್ವಕಾಲಿಕ ಗರಿಷ್ಠ ತಾಪಮಾನವು 45.6 ಡಿಗ್ರಿ ಸೆಲ್ಸಿಯಸ್ ಆಗಿತ್ತು. ಕಳೆದ ವಾರ ಮಾರ್ಚ್‌ನಿಂದ ವಾಯುವ್ಯ ಭಾರತವು ಸಾಮಾನ್ಯ ತಾಪಮಾನಕ್ಕಿಂತ ಹೆಚ್ಚಿನ ತಾಪಮಾನವನ್ನು ದಾಖಲಿಸುತ್ತಿದೆ.
ಯೆಲ್ಲೋ ಅಲರ್ಟ್ ಘೋಷಣೆ
ಭಾರತೀಯ ಹವಾಮಾನ ಇಲಾಖೆ (IMD) ಹವಾಮಾನ ಇಲಾಖೆ ದೆಹಲಿಯಲ್ಲಿ ಇದೀಗ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದ್ದು, ತಾಪಮಾನಕ್ಕೆ ಸಂಬಂಧಿಸಿದಂತೆ ಕ್ರಮಕ್ಕೆ ಸೂಚಿಸಿದೆ. ಶಾಖದ ಅಲೆಯು ಪೀಡಿತ ಪ್ರದೇಶಗಳಲ್ಲಿ ದುರ್ಬಲ ಜನರಿಗೆ - ಶಿಶುಗಳು, ವೃದ್ಧರು, ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವ ಜನರಿಗೆ "ಮಧ್ಯಮ" ಆರೋಗ್ಯ ಕಾಳಜಿ ವಹಿಸಬೇಕು. ಎಲ್ಲೋ ಅಲರ್ಟ್ ಘೋಷಿತ ಪ್ರದೇಶಗಳಲ್ಲಿ ಜನರು ಶಾಖಕ್ಕೆ ಒಡ್ಡಿಕೊಳ್ಳುವುದನ್ನು ತಪ್ಪಿಸಬೇಕು, ಹಗುರವಾದ, ತಿಳಿ ಬಣ್ಣದ, ಸಡಿಲವಾದ, ಹತ್ತಿ ಬಟ್ಟೆಗಳನ್ನು ಧರಿಸಬೇಕು ಮತ್ತು ಬಟ್ಟೆ, ಟೋಪಿ ಅಥವಾ ಛತ್ರಿ ಇತ್ಯಾದಿಗಳನ್ನು ಬಳಸಿ ತಲೆಯನ್ನು ಮುಚ್ಚಬೇಕು ಎಂದು ಐಎಂಡಿ ಹೇಳಿದೆ.
ತಾಪಮಾನಕ್ಕೆ ಸಂಬಂಧಿಸಿದಂತೆ ಹವಾಮಾನ ಇಲಾಖೆ ನಾಲ್ಕು ಬಗೆಯ ಅಲರ್ಟ್ ಘೋಷಣೆ ಮಾಡುತ್ತಿದ್ದು, ಹಸಿರು (ಯಾವುದೇ ಕ್ರಮ ಅಗತ್ಯವಿಲ್ಲ), ಹಳದಿ (ವೀಕ್ಷಿಸಿ ಮತ್ತು ನವೀಕರಿಸಿ), ಕಿತ್ತಳೆ (ಸಿದ್ಧರಾಗಿರಿ) ಮತ್ತು ಕೆಂಪು (ಕ್ರಮ ತೆಗೆದುಕೊಳ್ಳಿ) ಎಂಬ ಅಲರ್ಟ್ ನೀಡುತ್ತದೆ.