ನವದೆಹಲಿ: 5 ರಿಂದ 11 ವರ್ಷದೊಳಗಿನ ಮಕ್ಕಳಿಗೆ ಬಯೋಲಾಜಿಕಲ್ ಇ ಕೋವಿಡ್ ಲಸಿಕೆ ಕಾರ್ಬೆವಾಕ್ಸ್ ತುರ್ತು ಬಳಕೆಗೆ ಕೇಂದ್ರ ಉನ್ನತ ಔಷಧ ಪ್ರಾಧಿಕಾರದ ತಜ್ಞರ ಸಮಿತಿ ಶಿಫಾರಸು ಮಾಡಿದೆ ಎಂದು ಅಧಿಕೃತ ಮೂಲಗಳು ಗುರುವಾರ ತಿಳಿಸಿವೆ.
2 ರಿಂದ 11 ವರ್ಷದೊಳಗಿನ ಮಕ್ಕಳಿಗೆ ಕೋವಾಕ್ಸಿನ್ ತುರ್ತು ಬಳಕೆ ಪರಿಶೀಲನೆಗಾಗಿ ಭಾರತ್ ಬಯೋಟೆಕ್ ನಿಂದ ಹೆಚ್ಚಿನ ಮಾಹಿತಿಯನ್ನು ಭಾರತದ ಕೇಂದ್ರ ಔಷಧ ಪ್ರಾಧಿಕಾರದ ತಜ್ಞರ ಸಮಿತಿ (ಸಿಡಿಎಸ್ ಸಿಒ) ಕೋರಿದೆ ಎಂದು ಮೂಲಗಳು ಹೇಳಿವೆ.
ಕಳೆದ ವರ್ಷ ಡಿಸೆಂಬರ್ ನಲ್ಲಿ ವಯಸ್ಕರಲ್ಲಿ ತುರ್ತು ಬಳಕೆಗಾಗಿ ನಿರ್ಬಂಧದೊಂದಿಗೆ ಕೋವಾಕ್ಸಿನ್ ಲಸಿಕೆ ಬಳಕೆಗೆ ಭಾರತೀಯ ಔಷಧ ನಿಯಂತ್ರಣ ಸಂಸ್ಥೆ (ಡಿಸಿಜಿಐ) ಅನುಮತಿ ನೀಡಿದ್ದಾರೆ.
ಹೈದರಾಬಾದ್ ಮೂಲದ ಜೈವಿಕ ತಂತ್ರಜ್ಞಾನ ಮತ್ತು ಜೈವಿಕ ಔಷಧೀಯ ಕಂಪನಿ ಬಯೋಲಾಜಿಕಲ್ ಇ ಲಸಿಕೆ ಕಾರ್ಬೆವಾಕ್ಸ್ ನ್ನು 12 ರಿಂದ 14 ವರ್ಷ ವಯಸ್ಸಿನ ಮಕ್ಕಳಿಗೆ ನೀಡಲು ಬಳಸಲಾಗುತ್ತಿದೆ. ಡಿಸೆಂಬರ್ 24, 2021 ರಂದು 12 ರಿಂದ 18 ವರ್ಷ ವಯಸ್ಸಿನವರಿಗೆ ಕೋವಾಕ್ಸಿನ್ ನ್ನು ತುರ್ತು ಬಳಕೆಗೆ ಡಿಸಿಜಿಐ ಅನುಮತಿ ನೀಡಿದೆ.
ಮಾರ್ಚ್ 16 ರಂದು 12-14 ವರ್ಷದೊಳಗೆ ಮಕ್ಕಳಿಗೆ ಲಸಿಕೆಯನ್ನು ದೇಶದಲ್ಲಿ ಆರಂಭಿಸಲಾಯಿತು. ಇಲ್ಲಿಯವರೆಗೂ 2.53 ಕೋಟಿ ಮಕ್ಕಳಿಗೆ ಕೋವಿಡ್-19 ಮೊದಲ ಡೋಸ್ ಲಸಿಕೆ ನೀಡಲಾಗಿದೆ. ಜನವರಿ 3 ರಿಂದ 12 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆಯನ್ನು ನೀಡಲಾಗುತ್ತಿದೆ.