ನವದೆಹಲಿ: ಪ್ರಮುಖ ಬೆಳವಣಿಗೆಯಲ್ಲಿ 2022-23ರಲ್ಲಿ ಸಾರ್ವಜನಿಕ ವಲಯ ಘಟಕದ ಮೊದಲ ಕಾರ್ಯತಂತ್ರದ ಮಾರಾಟದಲ್ಲಿ, ಕೇಂದ್ರ ಸರ್ಕಾರವು ಪವನ್ ಹನ್ಸ್ ಸಂಸ್ಥೆಯಲ್ಲಿನ ತನ್ನ ಸಂಪೂರ್ಣ ಶೇ. 51 ರಷ್ಟು ಷೇರುಗಳನ್ನು ಸ್ಟಾರ್ 9 ಮೊಬಿಲಿಟಿ ಸಂಸ್ಥೆಗೆ ಮಾರಾಟ ಮಾಡಿದೆ ಎಂದು ವಿತ್ತ ಸಚಿವಾಲಯದ ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ ಕೇಂದ್ರ ಸರ್ಕಾರ ಪವನ್ ಹನ್ಸ್ ಸಂಸ್ಥೆಯಲ್ಲಿನ ತನ್ನ ಪಾಲಿನ ಶೇ.51ರಷ್ಟು ಷೇರುಗಳನ್ನು 211.14 ಕೋಟಿ ರೂ.ಗೆ ಸ್ಟಾರ್ 9 ಮೊಬಿಲಿಟಿ ಸಂಸ್ಥೆಗೆ ಮಾರಾಟ ಮಾಡಿದೆ ಎಂದು ಹಣಕಾಸು ಸಚಿವಾಲಯ ಶುಕ್ರವಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಸ್ಟಾರ್9 ಮೊಬಿಲಿಟಿ ಸಂಸ್ಥೆಯು ತಮ್ಮ ಹಣಕಾಸಿನ ಬಿಡ್‌ಗಳನ್ನು ಸಲ್ಲಿಸಿದ ಮೂವರಲ್ಲಿ ಅತಿ ಹೆಚ್ಚು ಬಿಡ್‌ದಾರರಾಗಿ ಹೊರಹೊಮ್ಮಿದ್ದು, ಸ್ಟಾರ್9 ಮೊಬಿಲಿಟಿ ಸಂಸ್ಥೆ ಅಲ್ಲದೆ ಬಿಗ್ ಚಾರ್ಟರ್, ಮಹಾರಾಜ ಏವಿಯೇಷನ್ ಮತ್ತು ಅಲ್ಮಾಸ್ ಗ್ಲೋಬಲ್ ಆಪರ್ಚುನಿಟಿ ಫಂಡ್ SPC ಯ ಒಕ್ಕೂಟ ಬಿಡ್ ಸಲ್ಲಿಸಿದ್ದವು. ಈ ಪೈಕಿ ಬಿಡ್ ಅತೀ ಹೆಚ್ಚಿನ ಮೊತ್ತಕ್ಕೆ ಬಿಡ್ ಮಾಡಿದ ಸ್ಟಾರ್9 ಮೊಬಿಲಿಟಿ ಸಂಸ್ಥೆಯ ಪಾಲಾಗಿದೆ.
ಪವನ್ ಹನ್ಸ್, ಕೇಂದ್ರ ಸರ್ಕಾರ ಮತ್ತು ONGC ನಡುವಿನ ಜಂಟಿ ಉದ್ಯಮವಾಗಿದ್ದು, ಇದು ಹೆಲಿಕಾಪ್ಟರ್ ಮತ್ತು ಏರೋ ಮೊಬಿಲಿಟಿ ಸೇವೆಗಳನ್ನು ಒದಗಿಸುತ್ತದೆ. ಪವನ್ ಹನ್ಸ್ ಲಿಮಿಟೆಡ್ ಕಳೆದ ಮೂರು ಹಣಕಾಸು ವರ್ಷಗಳಲ್ಲಿ ನಷ್ಟವನ್ನು ಅನುಭವಿಸಿದ್ದು, ಈ ಕಂಪನಿಯು 42 ಹೆಲಿಕಾಪ್ಟರ್‌ಗಳನ್ನು ಹೊಂದಿದೆ.
ಸರ್ಕಾರವು ಈ ಕಂಪನಿಯಲ್ಲಿ ಶೇ.51ರಷ್ಟು ಪಾಲನ್ನು ಹೊಂದಿದ್ದು, ONGC ಷೇ.49 ರಷ್ಟು ಪಾಲು ಹೊಂದಿದೆ. ONGC ಈ ಹಿಂದೆಯೇ ಸರ್ಕಾರದ ಕಾರ್ಯತಂತ್ರದ ಹೂಡಿಕೆ ವಹಿವಾಟಿನಲ್ಲಿ ಗುರುತಿಸಲಾದ ಯಶಸ್ವಿ ಬಿಡ್‌ದಾರರಿಗೆ ತನ್ನ ಸಂಪೂರ್ಣ ಷೇರುಗಳನ್ನು ನೀಡಲು ನಿರ್ಧರಿಸಿತ್ತು.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನೊಳಗೊಂಡ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಸ್ಟಾರ್ 9 ಮೊಬಿಲಿಟಿಯ ಬಿಡ್‌ಗೆ ಅನುಮೋದನೆ ನೀಡಿದೆ.
ಹಣಕಾಸು ಸಚಿವಾಲಯ ಹೊರಡಿಸಿದ ಹೇಳಿಕೆಯ ಪ್ರಕಾರ, ಏಳು ಸಂಸ್ಥೆಗಳು ಬಿಡ್ ಗೆ ಆಸಕ್ತಿ ವ್ಯಕ್ತಪಡಿಸಿದ್ದವು. ಈ ಪೈಕಿ ನಾಲ್ಕು ಸಂಸ್ಥೆಗಳು ಶಾರ್ಟ್-ಲಿಸ್ಟ್ ಆಗಿದ್ದವು. ಅವುಗಳಲ್ಲಿ ಮೂರು ಹಣಕಾಸು ಬಿಡ್‌ಗಳನ್ನು ಸಲ್ಲಿಸಿವೆ. ಈ ಮೂರರಲ್ಲಿ, Star9 ಮೊಬಿಲಿಟಿಯ ಬಿಡ್ ಬೆಲೆ 199.92 ಕೋಟಿಗಿಂತ ಹೆಚ್ಚಾಗಿದ್ದು, ಇತರೆ ಸಂಸ್ಥೆಗಳು ಮಾಡಿದ್ದ ಬಿಡ್ ಗಳಿಗಿಂತ ಹೆಚ್ಚಿನದಾಗಿದೆ ಎಂದು ಹೇಳಲಾಗಿದೆ.