ಮಂಜೇಶ್ವರ : ಕೋಡಿ ಶ್ರೀ ರಕ್ತೇಶ್ವರಿ ಹಾಗೂ ಪರಿವಾರ ದೈವಗಳ ಕ್ಷೇತ್ರ ಬೇರಿಕೆಗೋಳಿಯಲ್ಲಿ ಶ್ರೀ ರಕ್ತೇಶ್ವರಿ ಹಾಗೂ ಪರಿವಾರ ದೈವಗಳ ನೇಮೋತ್ಸವ ಸುಮಾರು 51 ವರ್ಷಗಳ ಬಳಿಕ ಇತ್ತೀಚೆಗೆ ಎರಡು ದಿನಗಳ ಕಾಲ ಸಂಭ್ರಮದಿಂದ ಜರಗಿತು.
ದೈವಜ್ಞರ ಮಾರ್ಗದರ್ಶನದಂತೆ 51 ವರ್ಷಗಳ ಬಳಿಕ ಪುನರಾರಂಭಗೊಂಡಿರುವ ನೇಮೋತ್ಸವದ ಅಂಗವಾಗಿ ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಮೀಯಪದವು ಅಯ್ಯಪ್ಪಮಂದಿರದ ಮೂಲಕ ಬೇರಿಕೆಗೋಳಿಗೆ ಹಸಿರುವಾಣಿ ಮೆರವಣಿಗೆ ಜರಗಿತು.
ಅದರಂಗವಾಗಿ ಮೊದಲದಿನ ಏಪ್ರಿಲ್ 22ರಂದು ಮುಡಿಪಿನ್ನಾರ್ ದೈವದ ನೇಮ ಹಾಗೂ ಮಲರಾಯ, ಬಂಟ ದೈವದ ನೇಮ ಹಾಗೂ 23ರರಂದು ಜರಗಿತು. ಹಾಗೂ ಬಳಿಕ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಊರ ಪ್ರತಿಭೆಗಳಿಂದ ಸಾಂಸ್ಕೃತಿಕ ವೈವಿಧ್ಯ, ಹಿರಿಯ ರಂಗನಟ ವಸಂತ ಭಟ್ ತೊಟ್ಟೆತ್ತೋಡಿಯವರಿಂದ ಬಯ್ಯಮಲ್ಲಿಗೆ ಏಕ ವ್ಯಕ್ತಿ ನಾಟಕ ಜರಗಿತು.
ಮೂಲನಂಬಿಕೆ ಉಳಿಸಿಕೊಳ್ಳಿ: ಒಡಿಯೂರು ಶ್ರೀ
ಎಪ್ರಿಲ್ 23ರರಂದು ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ ಮಾತನಾಡಿದ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮಿಗಳು ನಾವೆಲ್ಲ ಮೂಲನಂಬಿಕೆ ಉಳಿಸಿಕೊಳ್ಳ ಬೇಕಾಗಿದೆ ಹಾಗೂ ಮೂಡಂಬಿಕೆ ಅಳಿಸಬೇಕಾಗಿದೆ ಎಂದರು. ಭಾರತದ ಧರ್ಮ ಸಂಸ್ಕೃತಿ ಅತೀ ಪುರಾತನವಾದದ್ದು ಅದರ ಮೂಲ ಸೆಲೆ ನಂಬಿಕೆಯೇ ಆಗಿದೆ, ದೈವ ದೇವರ ಮೇಲಿನ ನಂಬಿಕೆಯಿಂದ ಸಮಾಜ ಧರ್ಮ ಪಥದಲ್ಲಿ ಬದುಕಿದಾಗ ಸಮಾಜ ಶಾಂತಿ ನೆಲೆಗೊಳ್ಳುತ್ತದೆ. ತನ್ಮೂಲಕ ವಿಶ್ವಶಾಂತಿ ಕೈಗೂಡುತ್ತದೆ ಎಂದು ಶ್ರೀಗಳು ಸಂದೇಶ ನೀಡಿದರು. ಧಾರ್ಮಿಕ ಸಭೆಯಲ್ಲಿ ಶ್ರೀ ಕ್ಷೇತ್ರದ ಹಿರಿಯರಾದ ಕೋಡಿ ಶಂಕರ ಭಟ್ ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮಶ್ರೀ ಬೋಳಂತಕೋಡಿ ರಾಮಭಟ್ ದೀಪ ಪ್ರಜ್ವಲನೆ ಗೈದು ಧಾರ್ಮಿಕ ಸಭೆ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ, ಐಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಕೋಡಿಬೈಲು ನಾರಾಯಣ ಹೆಗ್ಡೆ, ಮೀಂಜ ಪಂಚಾಯತಿ ಅಧ್ಯಕ್ಷೆ ಸುಂದರಿ ಆರ್ ಶೆಟ್ಟಿ, ಶ್ರೀ ಮಹಾಲಿಂಗೇಶ್ವರ ಸೇವಾಟ್ರಸ್ಟ್ ಶ್ರೀಮಹಾಲಿಂಗೇಶ್ವರ ದೇವಸ್ಥಾನ ಚಿಗುರುಪಾದೆ ಇದರ ಅಧ್ಯಕ್ಷೆ ಪ್ರೇಮಾ ಕೆ ಭಟ್ ತೊಟ್ಟೆತ್ತೋಡಿ, ನ್ಯಾಯವಾದಿ ಕಳ್ಳಿಗೆಬೀಡು ತಾರಾನಾಥ ಶೆಟ್ಟಿ, ಹೊಸಕಟ್ಟೆ ಶ್ರೀ ರಕ್ತೇಶ್ವರಿ ಸೇವಾಟ್ರಸ್ಟ್ ಅಧ್ಯಕ್ಷ ರಂಜಿತ್ ಹೊಸಕಟ್ಟೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ರಘುರಾಮ ಭಂಢಾರಿ ಪಳ್ಳತ್ತಡ್ಕ, ಪದ್ಮನಾಭ ರೈ ದರ್ಭೆ, ಬಿ ಸದಾಶಿವ ರೈ ಮಾಜಿ ಅಧ್ಯಕ್ಷರು ಮೀಂಜ ಪಂಚಾಯತಿ, ಕೋಡಿ ಶ್ರೀ ರಕ್ತೇಶ್ವರೀ ಸೇವಾಸಮಿತಿಯ ಕಾರ್ಯಾಧ್ಯಕ್ಷ ಚಂದ್ರಶೇಖರ ಶೆಟ್ಟಿ ಪಳ್ಳತ್ತಡ್ಕ, ನಾರಾಯಣ ಬಂಗೇರ ಕೊಮ್ಮಂಗಳ ಕೋಡಿ ಬಂಗೇರ ಕುಟುಂಬ ಪ್ರತಿನಿಧಿ ಉಪಸ್ಥಿತರಿದ್ದರು. ಕೋಡಿ ಶ್ರೀ ರಕ್ತೇಶ್ವರೀ ಸೇವಾಸಮಿತಿಯ ಅಧ್ಯಕ್ಷ ವಾಸುದೇವ ಶೆಟ್ಟಿ ಸ್ವಾಗತಿಸಿ, ರಾಜಾರಾಮ ರಾವ್ ಮೀಯಪದವು ನಿರೂಪಿಸಿದರು. ಶ್ರೀ ರಕ್ತೇಶ್ವರೀ ಸೇವಾಸಮಿತಿಯ ಪ್ರಧಾನ ಕಾರ್ಯದರ್ಶಿ ಟಿ ಡಿ ಸದಾಶಿವ ರಾವ್ ವ|ಂದಿಸಿದರು. ಬಳಿಕ ಹವ್ಯಾಸಿ ಯಕ್ಷಬಳಗ ಕೋಳ್ಯೂರು ಹಾಗೂ ಅತಿಥಿ ಕಲಾವಿದರಿಂದ ಶಾಂಭವಿ ವಿಜಯ ಯಕ್ಷಗಾನ ಬಯಲಾಟ ಜರಗಿತು.