ರೋಮ್: ಈಶ ಫೌಂಡೇಷನ್ನ ಸದ್ಗುರು ಅವರು ಮಣ್ಣು ರಕ್ಷಣೆ ಸಲುವಾಗಿ ಹಮ್ಮಿಕೊಂಡಿರುವ ಮಣ್ಣು ಉಳಿಸಿ ಅಭಿಯಾನಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಈ ಅಭಿಯಾನ 54 ಕಾಮನ್‌ವೆಲ್ತ್ ರಾಷ್ಟ್ರಗಳ ಬೆಂಬಲ ಪ್ರತಿಜ್ಞೆಗೂ ಪಾತ್ರವಾಗಿದೆ.
ಹವಾಮಾನ ಬದಲಾವಣೆ, ಭೂಮಿಯ ಅವನತಿ ಮತ್ತು ಜೀವವೈವಿಧ್ಯದ ನಷ್ಟದಿಂದ ಭೂಮಿ ಮತ್ತು ಮಣ್ಣು ಅಪಾಯದಲ್ಲಿದೆ ಎಂದು ಕಾಮನ್‌ವೆಲ್ತ್ ಸೆಕ್ರೆಟರಿಯೇಟ್ ಗುರುತಿಸುತ್ತದೆ. ಈಶಾ ಫೌಂಡೇಶನ್ ಸಂಸ್ಥಾಪಕರಾದ ಸದ್ಗುರುಗಳು, ವಿಶ್ವದ ಮಣ್ಣನ್ನು ಅಳಿವಿನಿಂದ ರಕ್ಷಿಸಲು ಕಳೆದ ತಿಂಗಳು ಮಣ್ಣು ಉಳಿಸಿ ಜಾಗತಿಕ ಅಭಿಯಾನವನ್ನು ಪ್ರಾರಂಭಿಸಿದರು.
ಕಾಮನ್‌ವೆಲ್ತ್ ಕಾಲ್ ಟು ಆಯಕ್ಷನ್ ಆನ್ ಲಿವಿಂಗ್ ಲ್ಯಾಂಡ್ಸ್ (CALL) ನ ಉದ್ದೇಶವು ಮೂರು ರಿಯೊ ಕನ್ವೆನ್ಶನ್‌ಗಳ ಅಡಿಯಲ್ಲಿ ಒಪ್ಪಿಕೊಂಡ ಗುರಿಗಳನ್ನು ಕಾರ್ಯಗತಗೊಳಿಸುವುದು ಮತ್ತು ನಿಸರ್ಗದೊಂದಿಗೆ ಸಾಮರಸ್ಯದಿಂದ ಬದುಕುವ ಸಮಾನ ದೃಷ್ಟಿಕೋನವನ್ನು ಅನುಸರಿಸುವಲ್ಲಿ ಸಹ-ಪ್ರಯೋಜನಗಳನ್ನು ಬಳಸಿಕೊಳ್ಳುವುದು. ಮಣ್ಣು ಉಳಿಸಿ ಅಭಿಯಾನದ ಉದ್ದೇಶಗಳು CALLನ ಈ ಉದ್ದೇಶಗಳೊಂದಿಗೆ ಹೊಂದಿಕೆಯಾಗುತ್ತವೆ ಎಂದು ಹೇಳಿಕೆಯು ದೃಢಪಡಿಸಿದೆ.
ಮಣ್ಣನ್ನು ಅಳಿವಿನಿಂದ ಉಳಿಸುವ ಜಾಗತಿಕ ಪ್ರಯತ್ನವು ಹಲವಾರು ಭಾಗಗಳಿಂದ ಸ್ಥಿರವಾದ ಬೆಂಬಲ ಪಡೆಯುತ್ತಿದೆ. ಪ್ರಪಂಚದಾದ್ಯಂತದ ಪ್ರಸಿದ್ಧ ಕಲಾವಿದರು, ಕ್ರೀಡಾಪಟುಗಳು ಮತ್ತು ನಾಗರಿಕರ ಜೊತೆಗೆ ರಾಜಕೀಯ, ವ್ಯಾಪಾರ, ಸಾಮಾಜಿಕ, ಪರಿಸರ ಮತ್ತು ಸಾಂಸ್ಕೃತಿಕ ನಾಯಕರು ಮಣ್ಣನ್ನು ರಕ್ಷಿಸುವ ವ್ಯವಸ್ಥಿತ ಸುಧಾರಣೆಗಳು ಭೂಮಿಯ ಭವಿಷ್ಯವನ್ನು ಭದ್ರಪಡಿಸುವ ಮುಂದಿನ ಮಾರ್ಗವೆಂದು ಪ್ರತಿಪಾದಿಸಲು ಪ್ರಾರಂಭಿಸಿದ್ದಾರೆ.
ಸದ್ಗುರು ಪ್ರಸ್ತುತ ಯುರೋಪ್, ಮಧ್ಯ ಏಷ್ಯಾ ಮತ್ತು ಮಧ್ಯಪ್ರಾಚ್ಯದಲ್ಲಿ ಏಕಾಂಗಿ ಬೈಕ್ ಪ್ರಯಾಣದಲ್ಲಿದ್ದು, ಅವರು ಒಟ್ಟು 27 ರಾಷ್ಟ್ರಗಳಲ್ಲಿ 100 ದಿನಗಳೊಳಗೆ 30,000 ಕಿಲೋಮೀಟರ್ ಸಂಚರಿಸಲಿದ್ದಾರೆ. ಆ ಮೂಲಕ ಮಣ್ಣಿನ ರಕ್ಷಣೆ ಸಲುವಾಗಿ ದೇಶಾದ್ಯಂತ ನಾಗರಿಕ ಜಾಗೃತಿ ಮೂಡಿಸಲು ಮತ್ತು ತಮ್ಮ ದೇಶಗಳಲ್ಲಿ ಮಣ್ಣು ಉಳಿಸಲು ಮಣ್ಣು-ಸ್ನೇಹಿ ನೀತಿಗಳನ್ನು ತುರ್ತಾಗಿ ರೂಪಿಸಲು ಆಯಾ ಆಡಳಿತವನ್ನು ಒತ್ತಾಯಿಸುತ್ತಾರೆ. ಆರು ಕೆರಿಬಿಯನ್ ರಾಷ್ಟ್ರಗಳು ಮಣ್ಣು ಉಳಿಸಿ ಮಣ್ಣಿನ ಮರುಸ್ಥಾಪನೆಗೆ ಕೆಲಸ ಮಾಡುವ ಪ್ರತಿಜ್ಞೆಯೊಂದಿಗೆ ಒಡಂಬಡಿಕೆಗಳಿಗೆ ಸಹಿ ಹಾಕಿವೆ.
ಸದ್ಗುರು ರಾಜಕಾರಣಿಗಳು, ಮಾಧ್ಯಮದವರು, ಪರಿಸರಶಾಸ್ತ್ರಜ್ಞರು, ಪ್ರಭಾವಿಗಳು ಮತ್ತು ಅಭಿಪ್ರಾಯ ರೂಪಕರೊಂದಿಗೆ ಸಂವಹನ ನಡೆಸುತ್ತಿದ್ದಾರೆ ಮತ್ತು ಸಂವಹನ ನಡೆಸುವುದನ್ನು ಮುಂದುವರಿಸುತ್ತಾರೆ. ಅವರು ತಮ್ಮ 100 ದಿನಗಳ ಪ್ರಯಾಣದಲ್ಲಿ ಮೇ ತಿಂಗಳಲ್ಲಿ ಐವರಿ ಕೋಸ್ಟ್‌ನಲ್ಲಿ ನಡೆಯಲಿರುವ 15ನೇ ಪಕ್ಷಗಳ ಅಧಿವೇಶನದ ಮರುಭೂಮೀಕರಣದ ವಿರುದ್ಧ ಹೋರಾಡಲು ಯುನೈಟೆಡ್ ನೇಷನ್ಸ್ ಕನ್ವೆನ್ಷನ್ ಉದ್ದೇಶಿಸಿ ಮಾತನಾಡಲಿದ್ದಾರೆ. ಇದರಲ್ಲಿ 170 ದೇಶಗಳ ರಾಜಕೀಯ ನಾಯಕರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಅದೇ ತಿಂಗಳಲ್ಲಿ, ಸದ್ಗುರುಗಳು ದಾವೋಸ್‌ನಲ್ಲಿ ವಿಶ್ವ ಆರ್ಥಿಕ ವೇದಿಕೆಯಲ್ಲಿ ಮಾತನಾಡುತ್ತಾರೆ, ನಾಯಕರು ತಮ್ಮ ದೇಶಗಳಲ್ಲಿ ಅಳಿವಿನಂಚಿನಲ್ಲಿರುವ ಮಣ್ಣನ್ನು ಉಳಿಸಲು ಈಗಲೇ ಕಾರ್ಯಪ್ರವೃತ್ತರಾಗಬೇಕೆಂದು ಒತ್ತಾಯಿಸುತ್ತಾರೆ.
ಮಣ್ಣು ಉಳಿಸಿ ಅಭಿಯಾನವು 192 ದೇಶಗಳಿಗೆ ಮಣ್ಣು-ಸ್ನೇಹಿ ಮಾರ್ಗಸೂಚಿಗಳ ಕುರಿತು ದಾಖಲೆಗಳನ್ನು ಸಿದ್ಧಪಡಿಸಿದೆ. ಪ್ರತಿಯೊಂದು ದೇಶದ ಅಕ್ಷಾಂಶ, ಹವಾಮಾನ ಪರಿಸ್ಥಿತಿಗಳು, ಮಣ್ಣಿನ ಪ್ರಕಾರ, ಕೃಷಿ ಸಂಪ್ರದಾಯ ಮತ್ತು ಆರ್ಥಿಕ ನಿಯತಾಂಕಗಳನ್ನು ಗಣನೆಗೆ ತೆಗೆದುಕೊಂಡು ಪ್ರತ್ಯೇಕ ದಾಖಲೆಗಳನ್ನು ಸಿದ್ಧಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ www.savesoil.org ವೀಕ್ಷಿಸಬಹುದು.