ನವದೆಹಲಿ: ಗ್ರಾಮ ಪಂಚಾಯಿತಿಗಳ ಸುಸ್ಥಿರ ಅಭಿವೃದ್ಧಿ ಗುರಿ ಸಾಧಿಸಲು ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಪ್ರತಿನಿಧಿಗಳು ನಾಯಕತ್ವ ಪಾತ್ರ ವಹಿಸುವಂತೆ ಶಸಕ್ತಗೊಳಿಸುವ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರ ರಾಷ್ಟ್ರೀಯ ಗ್ರಾಮ ಸ್ವರಾಜ್ಯ ಅಭಿಯಾನದಡಿ (ಆರ್‌ಜಿಎಸ್‌ಎ) ₹5,911 ಕೋಟಿ ಅನುದಾನಕ್ಕೆ ಬುಧವಾರ ಅನುಮೋದನೆ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಸಭೆಯಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳ ಆಡಳಿತ ಸಾಮರ್ಥ್ಯ ಬಲಪಡಿಸುವ ಪರಿಷ್ಕೃತ ಆರ್‌ಜಿಎಸ್‌ಎ ಅನ್ನು ಇದೇ ಏಪ್ರಿಲ್ 1ರಿಂದ 2026 ರವರೆಗೆ ಮಾರ್ಚ್ 31ರವರೆಗೆ ಮುಂದುವರಿಸಲು ಅನುಮೋದನೆ ನೀಡಲಾಯಿತು.
₹5,911 ಕೋಟಿ ಅನುದಾನದಲ್ಲಿ ಕೇಂದ್ರದ ಪಾಲು ₹ 3,700 ಕೋಟಿ ಇರಲಿದ್ದು, ಉಳಿದ ₹ 2,211 ಕೋಟಿ ಹಣವನ್ನು ರಾಜ್ಯಗಳು ನೀಡಲಿವೆ ಎಂದು ಕೇಂದ್ರದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಸುಧಾರಣೆ ತರಲು ಮತ್ತು ಹಳ್ಳಿಗಳ ಅಭಿವೃದ್ಧಿ ಖಾತ್ರಿಗೆ ಪರಿಷ್ಕೃತ ಆರ್‌ಜಿಎಸ್‌ಎ ನೆರವಾಗಲಿದೆ. ಇದರಿಂದ ಗ್ರಾಮೀಣ ಮತ್ತು ನಗರ ಪ್ರದೇಶಗಳ ನಡುವಿನ ಅಂತರ ಕಡಿಮೆ ಮಾಡಲು ಹಾಗೂ ದೇಶದಾದ್ಯಂತ ಪಂಚಾಯತ್ ರಾಜ್ ಸಂಸ್ಥೆಗಳನ್ನು ಬಲಪಡಿಸಲು ಸಾಧ್ಯ ಎಂದು ಅವರು ಹೇಳಿದರು.
ಬಡತನ ಮುಕ್ತ ಮತ್ತು ಹಳ್ಳಿಗಳಲ್ಲಿ ಜೀವನೋಪಾಯ ಸುಧಾರಣೆ; ಆರೋಗ್ಯಕರ ಗ್ರಾಮ, ಮಕ್ಕಳ ಸ್ನೇಹಿ ಗ್ರಾಮ, ನೀರು ಸಮೃದ್ಧಿ ಗ್ರಾಮ; ಸ್ವಚ್ಛ ಮತ್ತು ಹಸಿರು ಗ್ರಾಮ; ಗ್ರಾಮದಲ್ಲಿ ಸ್ವಾವಲಂಬಿ ಮೂಲಸೌಕರ್ಯ, ಸಾಮಾಜಿಕವಾಗಿ ಸುರಕ್ಷಿತ ಗ್ರಾಮ; ಉತ್ತಮ ಆಡಳಿತದ ಗ್ರಾಮ ಹಾಗೂ ಗ್ರಾಮದ ಅಭಿವೃದ್ಧಿ ಈ ಒಂಬತ್ತು ಉದ್ದೇಶಗಳನ್ನು ಸಾಧಿಸಲು ಇದು ಅನುವು ಮಾಡಿಕೊಡಲಿದೆ ಎಂದು ಅವರು ವಿವರಿಸಿದರು.