ನವದೆಹಲಿ: ಹಲವು ರಾಜ್ಯಗಳ ಆದಾಯ ಏರುತ್ತಿದ್ದು ಜಿಎಸ್ ಟಿ ವಿಷಯವಾಗಿ ಕೇಂದ್ರದಿಂದ ಪರಿಹಾರದ ಅವಲಂಬನೆ ಕಡಿಮೆಯಾಗುವ ಪರಿಸ್ಥಿತಿ ನಿರ್ಮಾಣವಾಗಿದ್ದು ಜಿಎಸ್ ಟಿ ಪರಿಷತ್ ತೆರಿಗೆ ದರದಲ್ಲಿ ಮಹತ್ವದ ಬದಲಾವಣೆಗಳಿಗೆ ಮುಂದಾಗಿದೆ.
ಮುಂದಿನ ತಿಂಗಳು ಜಿಎಸ್ ಟಿ ಪರಿಷತ್ ಸಭೆ ನಡೆಯಲಿದ್ದು, ಶೇ.5 ರ ತೆರಿಗೆ ದರವನ್ನು (ಸ್ಲ್ಯಾಬ್) ತೆಗೆದುಹಾಕುವ ಪ್ರಸ್ತಾವನೆಯನ್ನು ಪರಿಗಣಿಸಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಹೆಚ್ಚು ಮಂದಿ ಬಳಸುವ ((mass consumption ) ಸರಕುಗಳ ತೆರಿಗೆ ವಿಭಾಗವನ್ನು ಶೇ.3ಕ್ಕೆ ವರ್ಗಾವಣೆ ಮಾಡಿ, ಉಳಿದ ಸರಕುಗಳ ತೆರಿಗೆ ದರವನ್ನು ಶೇ.8 ರ ವಿಭಾಗಕ್ಕೆ ಸೇರಿಸುವ ಪ್ರಸ್ತಾವನೆ ಇದೆ.
ಈಗಿರುವ ಜಿಎಸ್ ಟಿ ಸ್ವರೂಪ ನಾಲ್ಕು ತೆರಿಗೆ ವಿಭಾಗಗಳಲ್ಲಿದ್ದು, ಶೇ.5, 12, 18, 28 ರ ವಿಭಾಗಗಳಿವೆ. ಉಳಿದಂತೆ ಚಿನ್ನ ಹಾಗೂ ಚಿನ್ನಾಭರಣಕ್ಕೆ ಶೇ.3 ರಷ್ಟು ತೆರಿಗೆ ವಿಧಿಸಲಾಗುತ್ತಿದೆ.
ಪದಾರ್ಥಗಳಿಗೆ ಯಾವುದೇ ತೆರಿಗೆ ವಿಧಿಸದೇ ಜಿಎಸ್ ಟಿ ಯಿಂದ ಹೊರಗೆ ಇಡಲಾಗಿದೆ.
ಮೂಲಗಳ ಪ್ರಕಾರ ಆದಾಯ ವೃದ್ಧಿಗಾಗಿ ಆಹಾರೇತರ ಸರಕುಗಳನ್ನು ಶೇ.3 ಕ್ಕೆ ಇಳಿಕೆ ಮಾಡುವ ಮೂಲಕ ಆದಾಯ ಹೆಚ್ಚಿಸಿಕೊಳ್ಳಲು ಯೋಜಿಸಿದೆ. ಶೇ.5 ರಷ್ಟಿದ್ದ ತೆರಿಗೆ ದರವನ್ನು ಶೇ.7 ಕ್ಕೆ ಅಥವಾ 8, 9ಕ್ಕೆ ಏರಿಕೆ ಮಾಡುವ ಪ್ರಸ್ತಾವನೆಯೂ ಇದೆ. ಶೇ.5 ರ ತೆರಿಗೆಯನ್ನು ಶೇ.1 ರಷ್ಟು ಏರಿಕೆ ಮಾಡಿದರೂ ವಾರ್ಷಿಕವಾಗಿ ಇದರಿಂದ 50,000 ಕೋಟಿ ರೂಪಾಯಿ ಆದಾಯ ಹೆಚ್ಚಾಗಲಿದೆ.