ನವದೆಹಲಿ: ರಷ್ಯಾ-ಉಕ್ರೇನ್ ಯುದ್ಧದ ನಂತರ ಭಾರತದಲ್ಲಿ ಪೆಟ್ರೋಲ್ ಬೆಲೆ ಕೇವಲ ಶೇ. 5 ರಷ್ಟು ಮಾತ್ರ ಹೆಚ್ಚಾಗಿದೆ. ಆದರೆ ಕೆಲವು ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಪೆಟ್ರೋಲ್ ಬೆಲೆ ಶೇಕಡಾ 50ಕ್ಕಿಂತ ಹೆಚ್ಚಾಗಿದೆ ಎಂದು ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಮಂಗಳವಾರ ಲೋಕಸಭೆಯಲ್ಲಿ ಹೇಳಿದ್ದಾರೆ.
ಇಂದು ಲೋಕಸಭೆಯಲ್ಲಿ 'ಉಕ್ರೇನ್ ಪರಿಸ್ಥಿತಿ' ಕುರಿತು ಅಲ್ಪಾವಧಿಯ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಪೆಟ್ರೋಲಿಯಂ ಸಚಿವರು, ಆಪರೇಷನ್ ಗಂಗಾ ಒಂದು 'ಸಾರಿಗೆ ಕಾರ್ಯಾಚರಣೆ' ಅದು 'ಸ್ಥಳಾಂತರ ಕಾರ್ಯಾಚರಣೆ' ಅಲ್ಲ ಎಂಬ ಪ್ರತಿಪಕ್ಷಗಳ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದರು.
ಇದೇ ವೇಳೆ ಹೆಚ್ಚುತ್ತಿರುವ ಪೆಟ್ರೋಲ್ ಬೆಲೆಯನ್ನು ಉಲ್ಲೇಖಿಸಿದ ಸಚಿವರು, "ರಷ್ಯಾ-ಉಕ್ರೇನ್ ಯುದ್ಧದ ಪರಿಣಾಮ ಭಾರತದ ಮೇಲೆ ಮಾತ್ರ ಬೀರಿಲ್ಲ. ಇಡೀ ವಿಶ್ವ ಈ ಯುದ್ಧದ ಪರಿಣಾಮ ಅನುಭವಿಸುತ್ತಿದೆ" ಎಂದು ಹೇಳಿದರು.
ಯುದ್ಧದ ನಂತರ ಅಭಿವೃದ್ಧಿ ಹೊಂದಿದ ಮತ್ತು ಇತರ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಪೆಟ್ರೋಲ್ ಬೆಲೆ ಹಲವು ಪಟ್ಟು ಹೆಚ್ಚಲವಾಗಿದೆ. ಅವುಗಳಿಗೆ ಹೋಲಿಸಿದರೆ ಭಾರತದಲ್ಲಿ ಪೆಟ್ರೋಲ್ ಬೆಲೆಯಲ್ಲಿನ ಹೆಚ್ಚಳವು ತುಂಬಾ ಕಡಿಮೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.
ಅಮೆರಿಕ, ಬ್ರಿಟನ್, ಕೆನಡಾ, ಜರ್ಮನಿ ಮತ್ತು ಶ್ರೀಲಂಕಾದಂತಹ ದೇಶಗಳಲ್ಲಿ ಪೆಟ್ರೋಲ್ ಬೆಲೆ ಶೇಕಡಾ 50 ರಷ್ಟು ಹೆಚ್ಚಾಗಿದೆ ಎಂದು ಅವರು ಹೇಳಿದರು.