2022ರ ಸೆಪ್ಟೆಂಬರ್ 10ರಂದು ಕೀನ್ಯಾ ದೇಶದ ರಾಜಧಾನಿ ನೈರೋಬಿಯಲ್ಲಿ 6ನೇ ನಾವಿಕೋತ್ಸವ ವಿಶ್ವಕನ್ನಡ ಸಮ್ಮೇಳನ ನಡೆಯಲಿದೆ ಎಂದು ನಾವಿಕ ಸಂಸ್ಥೆ ಅಧ್ಯಕ್ಷ ಮಂಜು ರಾವ್ ತಿಳಿಸಿದ್ದಾರೆ.
ಕನ್ನಡ ಸಾಂಸ್ಕೃತಿಕ ಸಂಘ ಕೀನ್ಯಾದ ಸಹಯೋಗದೊಂದಿಗೆ ನಾವಿಕೋತ್ಸವ ನಡೆಯಲಿದ್ದು, ಅಮೆರಿಕಾದಲ್ಲಿ ನೆಲೆಸಿರುವ ನೂರಾರು ಕನ್ನಡಾಭಿಮಾನಿಗಳನ್ನು ಆಫ್ರಿಕಾ ಖಂಡದಲ್ಲಿ ನಡೆಯಲಿರುವ ಈ ಸಮ್ಮೇಳನಕ್ಕೆ ಕರೆದೊಯ್ಯುವ ಮಹಾತ್ವಾಕಾಂಕ್ಷೆಯ ಯೋಜನೆಯನ್ನು ನಾವಿಕ ಸಂಸ್ಥೆ ಹಾಕಿಕೊಂಡಿದೆ.
ನಾವು ವಿಶ್ವ ಕನ್ನಡಿಗರು (ನಾವಿಕ) ಸಂಸ್ಥೆಯು ಬೆಸಸಂಖ್ಯೆಯ ವರ್ಷಗಳಲ್ಲಿ ನಾವಿಕ-ಸಮ್ಮೇಳನಗಳನ್ನು ಅಮೆರಿಕದಲ್ಲಿಯೂ ಮತ್ತು ಸರಿ ಸಂಖ್ಯೆಯ ವರ್ಷಗಳಲ್ಲಿ ನಾವಿಕೋತ್ಸವವನ್ನು ಅಮೆರಿಕ ದೇಶದ ಹೊರಗಡೆ(ಬಹುಶಃ ಕರ್ನಾಟಕದಲ್ಲಿ) ಮಾಡುತ್ತಾ ಬಂದಿದೆ. ಕರೊನಾ ಮಹಾಮಾರಿಯ ಕಾರಣದಿಂದಾಗಿ ಕಳೆದ ಎರಡು ಸಮ್ಮೇಳನಗಳನ್ನು ಅಂತರ್ಜಾಲದ ಮೂಲಕ ವರ್ಚುವಲ್ ಆಗಿ ಆಯೋಜಿಸಲಾಗಿತ್ತು.
ನಾವಿಕೋತ್ಸವದಲ್ಲಿ ಪಾಲ್ಗೊಳ್ಳಲು ಕೀನ್ಯಾ ದೇಶಕ್ಕೆ ಅಮೆರಿಕದಿಂದ ಆಗಮಿಸುವ ಕನ್ನಡಿಗರಿಗಾಗಿ ಸಮ್ಮೇಳನದ ಜತೆಗೆ ಮಸೈಮರಾ ವನ್ಯ ರಕ್ಷಣಾಧಾಮ, ನೈವಷಾ ಸರೋವರ ಮುಂತಾದ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆ ಒಳಗೊಂಡ ಒಂದು ವಾರದ ಆಲ್ ಇನ್ಕ್ಲೂಸಿವ್(All-inclusive) ಟೂರ್ ಪ್ಯಾಕೇಜ್ ಮಾಡಲಾಗಿದೆ. ಅಮೆರಿಕಾದ ಕನ್ನಡಿಗರು ನೈರೋಬಿಯಲ್ಲಿ ನಡೆಯುವ ನಾವಿಕೋತ್ಸವ ಸಮ್ಮೇಳನದಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ, ನಾಟಕ, ಸಂಗೀತ, ನೃತ್ಯ ಹೀಗೆ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಜತೆಗೆ ಆಫ್ರಿಕಾ ದೇಶದ ಮನ ಮನೋಹರ ವನ್ಯಜೀವಿಗಳ ಪ್ರಕೃತಿಯ ಸೌಂದರ್ಯವನ್ನೂ ಕಣ್ತುಂಬಿಕೊಳ್ಳಲಿದೆ. ಜತೆಗೆ ಈಗ ಸಮ್ಮೇಳನದಲ್ಲಿ ಕರ್ನಾಟಕದಿಂದಲೂ ಪ್ರಸಿದ್ಧ ಕಲಾವಿದರು ಭಾಗವಹಿಸುವ ನಿರೀಕ್ಷೆ ಇದೆ.
ನಾವಿಕ ಸಂಸ್ಥೆಯು ಕನ್ನಡ ಭಾಷೆ, ಸಂಸ್ಕೃತಿ, ಕಲೆ ಉಳಿಸುವ ಜತೆಗೆ ಸಮಾಜಮುಖಿ ಕಾರ್ಯಗಳನ್ನೂ ಮಾಡುತ್ತಿದೆ. ಕರೊನಾ ಸಂಕಷ್ಟ ಕಾಲದಲ್ಲಿ ಕರ್ನಾಟಕದಲ್ಲಿರುವ ಬಡ ಮಕ್ಕಳಿಗೆ ಉಚಿತವಾಗಿ ಲ್ಯಾಪ್ಟಾಪ್, ಆಕ್ಸಿಜನ್ ಸೌಲಭ್ಯ, ಔಷಧ, ಪರಿಹಾರ ಸಾಮಗ್ರಿಯನ್ನು ನೀಡಿತ್ತು.