ಮಂಜೇಶ್ವರ: ಕೇರಳ ರಾಜ್ಯದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿಯ ನೂತನ ಷಟ್ಪಥದ ಕಾಮಗಾರಿ ಪೂರ್ಣಗೊಂಡರೆ ಸಾರ್ವಜನಿಕರು ಭೀಕರ ಸಮಸ್ಯೆಗಳನ್ನು ಎದುರಿಸ ಬೇಕಾದೀತೆಂದು ಜಿಲ್ಲಾ ಪಂಚಾಯತಿ ಮಾಜಿ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಎಚ್ಚರಿಸಿದ್ದಾರೆ. ಜನವಾಸವಿಲ್ಲದ ಪ್ರದೇಶಗಳ ಮೂಲಕ ಹಾದು ಹೋಗಬೇಕಾದ "ಎಕ್ಸ್ ಪ್ರೆಸ್ ಹೈವೆ" ಯನ್ನು ಕೇರಳದಂತಹ ಜನನಿಬಿಡ ಪ್ರದೇಶದಲ್ಲಿ ನಿರ್ಮಿಸುತ್ತಿರುವುದು ಸಾರ್ವಜನಿಕರಿಗೆ ತೀವ್ರ ತೊಂದರೆಯನ್ನು ಉಂಟು ಮಾಡಲಿದೆ ಎಂದು ಅವರು ಹೇಳಿದ್ದಾರೆ. ಗಡಿಭಾಗವಾದ ತಲಪಾಡಿಯಿಂದ ಚೆಂಗಳದ ತನಕ 39 ಕಿ. ಮೀ. ದೂರದ ಷಟ್ಪಥ ಕಾಮಗಾರಿ ಬಿರುಸಿನಿಂದ ನಡೆಯುತ್ತಿದ್ದು ಕಾಮಗಾರಿಯ ರೂಪುರೇಷೆ ಸಂಪೂರ್ಣ ಅವೈಜ್ಞಾನಿಕವಾಗಿದೆಯೆಂದು ಹರ್ಷಾದ್ ವರ್ಕಾಡಿ ಆರೋಪಿಸಿದ್ದಾರೆ.
1700 ಕೋ. ರೂ.ಗೂ ಮಿಕ್ಕಿದ ವೆಚ್ಚದಲ್ಲಿ ನಡೆಯುತ್ತಿರುವ ಮೊದಲ ಹಂತದ ಕಾಮಗಾರಿಯನ್ನು ಊರಾಲುಂಗಲ್ ಲೇಬರ್ ಕೋ ಆಪರೇಟಿವ್ ಸೊಸೈಟಿ ಎಂಬ ಕಾರ್ಮಿಕ ಸಹಕಾರಿ ಸಂಘ ಗುತ್ತಿಗೆ ಪಡೆದು ನಿರ್ಮಿಸುತ್ತಿದ್ದು, ರೂಪುರೇಷೆಯನ್ನು ಅಧ್ಯಯನ ಮಾಡಿದಾಗ ನಮ್ಮ ನಾಡು ಈ ಹೆದ್ದಾರಿಯಿಂದ ಇಬ್ಭಾಗವಾಗಲಿದೆ ಎಂಬುದು ಖಚಿತಗೊಂಡಿದೆ. ಮಾತ್ರವಲ್ಲ ಲಕ್ಷಾಂತರ ಜನರು ಈ ಹೆದ್ದಾರಿಯಿಂದಾಗಿ ವಿಭಿನ್ನ ತರದ ಹಿಂಸೆಯನ್ನು ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ. 24 ಮೀಟರ್ ಅಗಲದ ಷಟ್ಪಥ ಎರಡೂ ಭಾಗದಿಂದಲೂ ತಡೆಗೋಡೆ ಕಟ್ಟಿ ಮುಚ್ಚಲಾಗುತ್ತಿದ್ದು, ಸ್ಥಳೀಯ ನಾಗರಿಕರು ಎಡ ಮತ್ತು ಬಲ ಭಾಗದಲ್ಲಿರುವ ಸರ್ವೀಸ್ ರಸ್ತೆಯನ್ನು ಮಾತ್ರವೇ ಬಳಸಬೇಕು. 5 ಕಿ. ಮೀ. ಅಂತರದಲ್ಲಿ ಮಾತ್ರವೇ ಹೆದ್ದಾರಿಯ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಕ್ರಮಿಸಲು ಕೆಳ ಸೇತುವೆಯನ್ನು ನಿರ್ಮಿಸಲಿದ್ದು, ವಾಹನವಿಲ್ಲದ ಬಡ ನಾಗರಿಕರು ಬಸ್ಸಿನಿಂದ ಇಳಿದು ಹೆದ್ದಾರಿಯ ಇನ್ನೊಂದು ಭಾಗಕ್ಕೆ ಹೋಗಬೇಕಾದರೆ ಇದೇ ಕೆಳಸೇತುವೆಯ ಮೂಲಕ ಮಾತ್ರವೇ ಹೋಗಬೇಕು. ಇದಕ್ಕಾಗಿ 5 ಕಿ.ಮೀ. ನಡೆದೇ ಹೋಗಬೇಕಾದ ದುಸ್ಥಿತಿ ನಿರ್ಮಾಣವಾಗಲಿದೆ. ಸರ್ವಿಸ್ ರಸ್ತೆಯಿಂದ ವಾಹನಗಳು 3 ಕಿ.ಮೀ. ಅಂತರದಲ್ಲಿ ಮಾತ್ರವೇ ಏಕಮುಖವಾಗಿ ಹೆದ್ದಾರಿಯ ರಸ್ತೆಗೆ ಪ್ರವೇಶಿಸುವ ಅವಕಾಶವಿದ್ದು, ಹೆದ್ದಾರಿಯ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ದಾಟುವುದು ತಡೆಗೋಡೆ ಕಟ್ಟಿ ಇರುವ ಹಿನ್ನೆಲೆಯಲ್ಲಿ ಅಸಾಧ್ಯ. ಪ್ರತಿನಿತ್ಯ ಕಾಸರಗೋಡಿನಿಂದ ಮಂಗಳೂರು ಭಾಗಕ್ಕೆ ಶಿಕ್ಷಣ, ಉದ್ಯೋಗ, ಆರೋಗ್ಯ, ನಿಮಿತ್ತ ಸಹಸ್ರಾರು ಮಂದಿ ತೆರಳುತ್ತಿದ್ದು, 5.ಕಿ.ಮೀ ಅಂತರದಲ್ಲಿರುವ ಕೆಳ ಸೇತುವೆಯ ಮೂಲಕ ಮಾತ್ರವೇ ಹೆದ್ದಾರಿ ದಾಟಲು ಅವಕಾಶವಿರುವ ಹಿನ್ನೆಲೆಯಲ್ಲಿ ವಾಹನವಿಲ್ಲದವರು ಏನು ಮಾಡಬೇಕು ಎಂಬ ಪ್ರಶ್ನೆಗೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕೃತರಲ್ಲಿ ಉತ್ತರವೇ ಇಲ್ಲ.
ತಲಪಾಡಿಯಿಂದ ಚೆಂಗಳದ ತನಕ 39 ಕಿ.ಮೀ. ಅಂತರದಲ್ಲಿರುವ ನೂರಕ್ಕೂ ಮಿಕ್ಕಿದ ಶಾಲಾಕಾಲೇಜುಗಳು, ಅಂಗನವಾಡಿಗಳು, ಖಾಸಗಿ- ಸರ್ಕಾರಿ ಆಸ್ಪತ್ರೆಗಳು, ಸರ್ಕಾರಿ ಕಚೇರಿಗಳು, ಮಾರುಕಟ್ಟೆಗಳು, ಹೆದ್ದಾರಿಯ ಎರಡೂ ಬದಿಗಳಲ್ಲಿ ಇದ್ದು, ಸಾರ್ವಜನಿಕರು ಇಲ್ಲಿಗೆ ತೆರಳಬೇಕಾದರೆ 5 ಕಿ.ಮೀ. ದೂರದ ಕೆಳಸೇತುವೆಯನ್ನು ಕ್ರಮಿಸಿ ಹೋಗಬೇಕು. ವಾಹನವಿಲ್ಲದವರು ನಡೆದೇ ಹೋಗಬೇಕು ಅಥವಾ ಸರ್ವೀಸ್ ರಸ್ತೆಯಲ್ಲಿ ಓಡುವ 2 ಬಸ್ಸುಗಳನ್ನು ಆಶ್ರಯಿಸಿ ಹೋಗಬೇಕು. ದುರಾದೃಷ್ಟವಶಾತ್ ಹೆದ್ದಾರಿಯಲ್ಲಿ ಯಾವುದಾದರೂ ವಾಹನ ಅಪಘಾತ ನಡೆದ ಸಂದರ್ಭದಲ್ಲಿ ಸಾರ್ವಜನಿಕರು ತುರ್ತು ನೆರವು ನೀಡಬೇಕಾದರೆ ಇದೆ 5.ಕಿ.ಮೀ ವ್ಯಾಪ್ತಿಯಲ್ಲಿರುವ ಕೆಳ ಸೇತುವೆಯ ಮೂಲಕ ಹೆದ್ದಾರಿಯನ್ನು ಪ್ರವೇಶಿಸಿ ನೆರವಾಗಬೇಕು.
ಕೇರಳದಂತಹ ಜನಸಾಂದ್ರತೆ ಜಾಸ್ತಿ ಇರುವ ಪ್ರದೇಶದಲ್ಲಿ ತಡೆಗೋಡೆ ಕಟ್ಟಿ ಹೆದ್ದಾರಿ ನಿರ್ಮಿಸುತ್ತಿರುವುದು ಅಭಿವೃದ್ಧಿಯ ಹೆಸರಿನಲ್ಲಿ ಜನತೆಗೆ ಮಾಡುತ್ತಿರುವ ಘೋರ ಅನ್ಯಾಯವಾಗಿದೆ. ಸ್ಥಳೀಯ ಸಾರ್ವಜನಿಕರು ಎಕ್ಸ್ ಪ್ರೆಸ್ ಹೆದ್ದಾರಿಯಿಂದ ಅತಿಹೆಚ್ಚು ಸಮಸ್ಯೆಯನ್ನು ಎದುರಿಸಬೇಕಾಗಿದೆ. ಜನೋಪಯೋಗಿ ಆಗಬೇಕಾದ ರಾಷ್ಟ್ರೀಯ ಹೆದ್ದಾರಿ ಜನರಿಗೆ ಮಾರಕವಾಗಿ ಪರಿಣಮಿಸುತ್ತಿರುವುದು ನಿಜಕ್ಕೂ ದುರಂತ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಂಡರೆ ಭವಿಷ್ಯದಲ್ಲಿ ನಾಗರಿಕ ಸಮಾಜ ಎದುರಿಸಬೇಕಾದ ಸಮಸ್ಯೆಗಳನ್ನು ಗಮನದಲ್ಲಿಟ್ಟು ಹೆದ್ದಾರಿ ಕಾಮಗಾರಿ ನಡೆಸುವುದನ್ನು ಬಿಟ್ಟು, ಎರಡೂ ಬದಿಗಳಲ್ಲಿ ತಡೆ ಗೋಡೆಗಳನ್ನು ಕಟ್ಟಿ ನಾಡು ಇಬ್ಭಾಗ ಮಾಡುವುದು ನಾಗರಿಕ ಸಮಾಜ ಕ್ಷಮಿಸಲಾರರು. ಕೂಡಲೇ ಜನಪ್ರತಿನಿಧಿಗಳು ಅಧಿಕಾರಿಗಳು ಮುಂದೆ ಒದಗಬಹುದಾದ ಭೀಕರ ಸಮಸ್ಯೆಗಳಿಗೆ ಪರಿಹಾರ ಕಾಣಬೇಕೆಂದು ಹರ್ಷಾದ್ ವರ್ಕಾಡಿ ಆಗ್ರಹಿಸಿದ್ದಾರೆ.