ವಿಶ್ವಸಂಸ್ಥೆ: ಕರೊನಾ ಮಹಾಮಾರಿ ಕಳೆದ ವರ್ಷ ಜಗತ್ತಿನಾದ್ಯಂತ ಸುಮಾರು 7.7 ಕೋಟಿ ಜನರನ್ನು ತೀವ್ರ ಬಡತನದ ಕೂಪಕ್ಕೆ ತಳ್ಳಿದೆ. ಅನೇಕ ಅಭಿವೃದ್ಧಿಶೀಲ ದೇಶಗಳು ಸಾಲ ಮರುಪಾವತಿ ಮಾಡಲಾಗದೆ ಸಂಕಷ್ಟಕ್ಕೆ ಸಿಲುಕಿದ್ದು ಇದೀಗ ರಷ್ಯಾ-ಯೂಕ್ರೇನ್ ಯುದ್ಧದ ಪರಿಣಾಮದಿಂದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ ಎಂದು ವಿಶ್ವಸಂಸ್ಥೆಯ ವರದಿಯೊಂದು ತಿಳಿಸಿದೆ.
ಶ್ರೀಮಂತ ದೇಶಗಳು ಅತಿ ಕಡಿಮೆ ಬಡ್ಡಿಗೆ ದಾಖಲೆ ಪ್ರಮಾಣದ ಸಾಲಗಳನ್ನು ಪಡೆದಿದ್ದರಿಂದ ಸಾಂಕ್ರಾಮಿಕತೆ ಯಿಂದ ಆದ ಬಿಕ್ಕಟ್ಟಿನಿಂದ ಸುಧಾರಿಸಲು ಅವುಗಳಿಗೆ ಸಾಧ್ಯವಾಗಿದೆ. ಆದರೆ, ಬಡ ರಾಷ್ಟ್ರಗಳು ಸಾಲದ ಬಡ್ಡಿಗೆ ಅಪಾರ ಹಣ ವ್ಯಯಿಸಿವೆ. ಅವುಗಳ ಸಾಲದ ಬಡ್ಡಿ ದರವೂ ಹೆಚ್ಚಾಗಿದೆ. ಹೀಗಾಗಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹಾಗೂ ಪರಿಸರ ರಕ್ಷಣೆಗೆ ಹೆಚ್ಚಿನ ಹಣ ವೆಚ್ಚ ಮಾಡಲು ಆಗುತ್ತಿಲ್ಲ. ಅಸಮಾನತೆಯನ್ನು ಕಡಿಮೆ ಮಾಡಲೂ ಅವುಗಳಿಗೆ ಆಗುತ್ತಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.
2019ರಲ್ಲಿ 81.2 ಕೋಟಿ ಜನರು ತೀವ್ರ ಬಡತನದಲ್ಲಿ ಜೀವನ ಸಾಗಿಸಿದ್ದರು, ಅಂದರೆ ದೈನಿಕ 1.90 ಡಾಲರ್ ಅಥವಾ ಅದಕ್ಕಿಂತಲೂ ಕಡಿಮೆ ಹಣದಲ್ಲಿ ಅವರ ಬದುಕು ಸಾಗಿದೆ. ಕರೊನಾ ಮಹಾಮಾರಿ ಕಾಲದಲ್ಲಿ ಅಂದರೆ 2021ರಲ್ಲಿ ಈ ಸಂಖ್ಯೆ 88.9 ಕೋಟಿಗೆ ಏರಿದೆ ಎಂದು ವಿಶ್ವಸಂಸ್ಥೆ ವರದಿ ವಿವರಿಸಿದೆ. ಅಂದರೆ ಸುಮಾರು 7.7 ಕೋಟಿ ಜನರು ಹೊಸದಾಗಿ ಬಡತನದ ಕೂಪಕ್ಕೆ ಬಿದ್ದಿದ್ದಾರೆ.
ರಾಜತಾಂತ್ರಿಕ ಕಚೇರಿಯಲ್ಲಿ ನಿರ್ಬಂಧ: ಚೀನಾದ ಶಾಂಘೈಯಲ್ಲಿ ಕರೊನಾ ಮಹಾಮಾರಿಯ ಆರ್ಭಟ ಹೆಚ್ಚುತ್ತಿರುವುದರಿಂದ ಅಲ್ಲಿರುವ ಭಾರತದ ರಾಜತಾಂತ್ರಿಕ ಕಚೇರಿಯಲ್ಲಿನ ಕೆಲ ಸೇವೆಗಳ ಮೇಲೆ ನಿರ್ಬಂಧ ವಿಧಿಸಲಾಗಿದೆ. ಪೂರ್ವ ಚೀನಾದ ಭಾರತೀಯ ನಾಗರಿಕರು ತುರ್ತು ಕಾನ್ಸುಲಾರ್ ಸೇವೆಗಳಿಗಾಗಿ ಬೀಜಿಂಗ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಕಾನ್ಸುಲೇಟ್ ಕಚೇರಿ ಮಂಗಳವಾರ ತಿಳಿಸಿದೆ. ಸೋಂಕು ನಿಯಂತ್ರಣಕ್ಕಾಗಿ ಲಾಕ್ಡೌನ್ ಹೇರಿಕೆ ಮತ್ತು ಇತರ ನಿರ್ಬಂಧಗಳು ಜಾರಿಯಲ್ಲಿರುವುದರಿಂದ ತುರ್ತು ಸೇವೆಗಳನ್ನು ಪಡೆಯಲು ಅಗತ್ಯವಾದ ಮೊಬೈಲ್ ಮತ್ತು ಸಿಬ್ಬಂದಿಯ ಫೋನ್ ಸಂಖ್ಯೆಗಳನ್ನು ಕಚೇರಿ ಒದಗಿಸಿದೆ.
ವ್ಯಾಕ್ಸಿನ್ ಪರಿಣಾಮ ಉತ್ತಮ: ರೋಗನಿರೋಧಕ ಶಕ್ತಿ ಕಡಿಮೆಯಿರುವ ರೋಗಿಗಳಿಗೂ ಉತ್ತಮ ರಕ್ಷಣೆ ನೀಡಬಲ್ಲ ಹೊಸ ಕೋವಿಡ್ ಲಸಿಕೆಯೊಂದನ್ನು ಅಮೆರಿಕದ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ಲ್ಯುಕೇಮಿಯಾ ಮತ್ತು ಲಿಂಫೋಮಾದಂಥ ಕ್ಯಾನ್ಸರ್ ಇರುವ ವ್ಯಕ್ತಿಗಳಿಗೂ ಈ ಲಸಿಕೆ ಪರಿಣಾಮಕಾರಿಯಾಗಿರುತ್ತದೆ ಎಂದು ಅಧ್ಯಯನ ವರದಿ ತಿಳಿಸಿದೆ. ಮಂಗಳವಾರ ಲೂಸಿಯಾನಾದಲ್ಲಿ ನಡೆದ ಅಮೆರಿಕನ್ ಅಕಾಡೆಮಿ ಆಫ್ ಕ್ಯಾನ್ಸರ್ ರೀಸರ್ಚ್ನ ವಾರ್ಷಿಕ ಸಭೆಯಲ್ಲಿ ಫಲಿತಾಂಶ ಮಂಡಿಸಲಾಗಿದೆ.
ಹೊಸ ತಳಿಗಳ ಮೇಲೆ ನಿಗಾ: ಕರೊನಾ ವೈರಸ್ನ ಒಮಿಕ್ರಾನ್ ವಂಶೀಯ ಉಪ-ತಳಿಗಳ ಮೇಲೆ ನಿಗಾ ಇಟ್ಟಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಹೇಳಿದೆ. ಸಾಂಕ್ರಾಮಿಕ ರೋಗಗಳ ಕುರಿತ ಸಾಪ್ತಾಹಿಕ ಅಪ್ಡೇಟ್ನಲ್ಲಿ ಈ ಮಾಹಿತಿ ನೀಡಿರುವ ಡಬ್ಲ್ಯುಎಚ್ಒ, ಒಮಿಕ್ರಾನ್ ರೂಪಾಂತರಿಯೇ ಸದ್ಯಕ್ಕೆ ಜಗತ್ತಿನಲ್ಲಿ ಹೆಚ್ಚು ಪ್ರಸರಣಗೊಳ್ಳುತ್ತಿರುವ ವೈರಸ್ ಆಗಿದೆ ಎಂದು ಹೇಳಿದೆ. ಬಿಎ.1, ಬಿಎ.2, ಬಿಎ.3 ಅಲ್ಲದೆ ಬಿಎ.4 ಹಾಗೂ ಬಿಎ.5 ಉಪ-ತಳಿಗಳನ್ನು ನಿಕಟವಾಗಿ ಪರಿಶೀಲಿಸಲಾಗುತ್ತಿದೆ. ಉಪ-ತಳಿಗಳಲ್ಲಿ ಬಿಎ.1/ಬಿಎ.2 ಮಿಶ್ರಣದ ಎಕ್ಸ್ಇನಂಥದ್ದೂ ಸೇರಿವೆ ಎಂದು ಡಬ್ಲ್ಯುಎಚ್ಒ ತಿಳಿಸಿದೆ. ಈ ಉಪತಳಿಗಳ ಲಕ್ಷಣಗಳು ಹಾಗೂ ಸಾರ್ವಜನಿಕ ಆರೋಗ್ಯದ ಮೇಲೆ ಅವುಗಳು ಬೀರಬಹುದಾದ ಪರಿಣಾಮದ ಬಗ್ಗೆ ವಿಜ್ಞಾನಿಗಳೊಂದಿಗೆ ಸಮಾಲೋಚನೆ ನಡೆಸುತ್ತಿರುವುದಾಗಿಯೂ ಡಬ್ಲ್ಯುಎಚ್ಒ ಹೇಳಿದೆ. ವೈರಸ್ಗಳ ಮೇಲೆ ನಿಗಾ ಇರಿಸುವಂತೆ ಹಾಗೂ ಸಾಧ್ಯವಿರುವೆಡೆ ಲಭ್ಯ ಸಾರ್ವಜನಿಕ ಡೇಟಾಗಳನ್ನು ವಿನಿಮಯ ಮಾಡಿಕೊಳ್ಳುವಂತೆ ವಿವಿಧ ದೇಶಗಳಿಗೆ ಡಬ್ಲ್ಯುಎಚ್ಒ ಶಿಫಾರಸು ಮಾಡಿದೆ.