ಇಸ್ಲಾಮಾಬಾದ್: ಅವಿಶ್ವಾಸ ಗೊತ್ತುವಳಿ ತಿರಸ್ಕೃತ ಹಾಗೂ ರಾಷ್ಟ್ರೀಯ ಅಸೆಂಬ್ಲಿ ವಿಸರ್ಜಿಸಿದ್ದ ಡೆಪ್ಯೂಟಿ ಸ್ಪೀಕರ್ ನಿರ್ಧಾರ ಅಸಂವಿಧಾನಿಕ ಎಂದು ಪಾಕಿಸ್ತಾನ್ ಸುಪ್ರೀಂ ಕೋರ್ಟ್ ಹೇಳಿದ್ದು ಇದರಿಂದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಗೆ ತೀವ್ರ ಹಿನ್ನಡೆಯಾಗಿದೆ.
ನಿನ್ನೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ ಪೀಠ ಚುನಾವಣೆ ಪ್ರಸ್ತಾಪವನ್ನು ತಿರಸ್ಕರಿಸಿದ್ದು ಏಪ್ರಿಲ್ 9ರಂದು ಬೆಳಗ್ಗೆ 10 ಗಂಟೆಗೆ ಬಹುಮತ ಸಾಬೀತು ಮಾಡುವಂತೆ ಇಮ್ರಾನ್ ಖಾನ್ ಗೆ ಸೂಚಿಸಿದ್ದು, ಇದರೊಂದಿಗೆ ಸುಪ್ರೀಂ ಕೋರ್ಟ್ ರಾಷ್ಟ್ರೀಯ ಅಸೆಂಬ್ಲಿಯನ್ನು ಮರುಸ್ಥಾಪಿಸಿದೆ. ಅವಿಶ್ವಾಸ ನಿರ್ಣಯ ಯಶಸ್ವಿಯಾದರೆ ಹೊಸ ಪ್ರಧಾನಿಯನ್ನು ಆಯ್ಕೆ ಮಾಡಬೇಕು ಎಂದು ನ್ಯಾಯಾಲಯ ಹೇಳಿದೆ.
ಸುಪ್ರೀಂ ಕೋರ್ಟ್ ತೀರ್ಪಿನ ನಂತರ, ರಾಷ್ಟ್ರೀಯ ಅಸೆಂಬ್ಲಿಯಲ್ಲಿ ವಿರೋಧ ಪಕ್ಷದ ನಾಯಕ ಶಹಬಾಜ್ ಷರೀಫ್ ಅವರು ತೀರ್ಪಿನ ನಂತರ ಪಾಕಿಸ್ತಾನವನ್ನು ಉಳಿಸಲಾಗಿದೆ ಎಂದು ಹೇಳಿದರು. ಪಾಕಿಸ್ತಾನದ ಜನರ ಪ್ರಾರ್ಥನೆಯನ್ನು ಸ್ವೀಕರಿಸಲಾಗಿದೆ ಎಂದರು. ಅವಿಶ್ವಾಸ ನಿರ್ಣಯದ ಮೇಲಿನ ಮತದಾನದ ವೇಳೆ ಅಚ್ಚರಿ ಮೂಡಿಸುತ್ತೇವೆ ಎಂದರು. ಸುಪ್ರೀಂ ಕೋರ್ಟ್‌ನ ತೀರ್ಪಿನ ನಂತರ ರಾಷ್ಟ್ರೀಯ ಅಸೆಂಬ್ಲಿ ಬಲಗೊಳ್ಳಲಿದೆ ಎಂದು ಶಹಬಾಜ್ ಷರೀಫ್ ಹೇಳಿದ್ದಾರೆ.
342 ಸದಸ್ಯ ಬಲದ ಪಾಕ್ ಸಂಸತ್ತಿನ ಕೆಳ ಸದನದಲ್ಲಿ ಬಹುಮತ ಕಳೆದುಕೊಂಡಿರುವ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯ ಮೇಲಿನ ಮತದಾನವನ್ನು ಉಪ ಸ್ಪೀಕರ್ ಖಾಸಿಂ ಸೂರಿ ತಿರಸ್ಕರಿಸುತ್ತಿದ್ದಂತೆಯೇ, ಪ್ರಧಾನಿ ಅವರ ಸಲಹೆಯಂತೆ ರಾಷ್ಟ್ರಾಧ್ಯಕ್ಷ ಅರಿಫ್ ಅಲ್ವಿ ನ್ಯಾಷನಲ್ ಅಸೆಂಬ್ಲಿಯನ್ನು ಕಳೆದ ಭಾನುವಾರ ವಿಸರ್ಜಿಸಿತ್ತು.