ಮುಂಬೈ: ದೇಶದ ಅತಿ ದೊಡ್ಡ ಜೀವ ವಿಮಾ ಸಂಸ್ಥೆ ಎಲ್‌ಐಸಿಯು ತನ್ನ 21,000 ಕೋಟಿ ರೂ. ಮೌಲ್ಯದ ಐಪಿಒ (initial public offering) ಪ್ರತಿ ಷೇರಿಗೆ ರೂ 902 ರಿಂದ 949 ದರವನ್ನು ಬುಧವಾರ ನಿಗದಿಪಡಿಸಿದ್ದು, ಇದೇ ಮೇ 4 ರಂದು ಎಲ್ಐಸಿ ಐಪಿಒ ಲೋಕಾರ್ಪಣೆಯಾಗಲಿದೆ.
ಕೇಂದ್ರ ಸರ್ಕಾರವು ಸುಮಾರು 21,000 ಕೋಟಿ ರೂ. ಆಫರ್-ಫಾರ್-ಸೇಲ್ (OFS) ಮಾರ್ಗದ ಮೂಲಕ ಈ IPO ನೊಂದಿಗೆ, 22.13 ಕೋಟಿ ಷೇರುಗಳನ್ನು ಮಾರಾಟ ಮಾಡುವ ಮೂಲಕ ಸರ್ಕಾರವು ತನ್ನ ಶೇ.3.5 ರಷ್ಟು ಪಾಲನ್ನು ಸರ್ಕಾರಿ ಸ್ವಾಮ್ಯದ ವಿಮಾ ಸಂಸ್ಥೆಯಲ್ಲಿ ಹಿಂತೆಗೆದುಕೊಳ್ಳಲು ನೋಡುತ್ತಿದೆ.
ಚಿಲ್ಲರೆ ಹೂಡಿಕೆದಾರರು ಮತ್ತು ಅರ್ಹ ಉದ್ಯೋಗಿಗಳು ಪ್ರತಿ ಈಕ್ವಿಟಿ ಷೇರಿಗೆ ರೂ 45 ರ ರಿಯಾಯಿತಿಯನ್ನು ಪಡೆಯಬಹುದಾಗಿದ್ದು, ಪಾಲಿಸಿದಾರರು ಪ್ರತಿ ಈಕ್ವಿಟಿ ಷೇರಿಗೆ ರೂ 60 ರ ರಿಯಾಯಿತಿ ಪಡೆಯಲಿದ್ದಾರೆ ಎಂದು ಎಲ್ ಐಸಿ ಮೂಲಗಳು ತಿಳಿಸಿವೆ.
ಮೇ 4 ರಂದು ಷೇರು ಚಂದಾದಾರಿಕೆಗಾಗಿ ಎಲ್ಐಸಿ ಐಪಿಒ ತೆರೆಯಲಿದ್ದು, ಮೇ 9 ರಂದು ಮುಕ್ತಾಯಗೊಳ್ಳುತ್ತದೆ.