HEALTH TIPS

ತಿರುಪತಿ: ಮಗನ ಶವವನ್ನು ಅಪ್ಪಿ ಹಿಡಿದು 90 ಕಿ.ಮೀ. ಬೈಕ್‌ನಲ್ಲೇ ಸಾಗಿದ ತಂದೆ

             ತಿರುಪತಿ: ಉಸಿರು ನಿಲ್ಲಿಸಿರುವ ಹತ್ತು ವರ್ಷ ವಯಸ್ಸಿನ ಮಗ, ಮೃ‌ತ ದೇಹವನ್ನು ಹೊತ್ತೊಯ್ಯಲು 10 ಸಾವಿರ ರೂಪಾಯಿ ಕೇಳಿದ ಆಂಬುಲೆನ್ಸ್‌ ಚಾಲಕ. ದಿಕ್ಕು ತೋಚದಂತಾಗಿ ತೋಳಲ್ಲಿ ಮಗನ ಶವವನ್ನು ಹೊತ್ತು ಬೈಕ್‌ನಲ್ಲೇ 90 ಕಿ.ಮೀ. ದೂರದ ಪ್ರಯಾಣ ಹೊರಟ ತಂದೆ.

           ಸರ್ಕಾರ ನಡೆಸುತ್ತಿರುವ ಆಸ್ಪತ್ರೆಯಲ್ಲಿನ ಈ ದುಸ್ಥಿತಿಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಅನಾರೋಗ್ಯದ ಕಾರಣ ಆರ್‌ಯುಐಎ ಸರ್ಕಾರಿ ಜನರಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕ ಜೇಸವಾ ಸೋಮವಾರ ರಾತ್ರಿ ಸಾವಿಗೀಡಾದನು. ಕೃಷಿ ಕೆಲಸಗಳನ್ನು ಮಾಡುವ ಆತನ ತಂದೆಗೆ ಆಸ್ಪತ್ರೆಯಿಂದ ಮೃತ ದೇಹವನ್ನು ಸಾಗಿಸಲು ಆಂಬುಲೆನ್ಸ್ ಚಾಲಕ ₹10,000ಕ್ಕೆ ಬೇಡಿಕೆ ಇಟ್ಟಿದ್ದರು. ಅವರು ಆಸ್ಪತ್ರೆಯಿಂದ ಸುಮಾರು 90 ಕಿ.ಮೀ. ದೂರದ ಅನ್ನಮಯ್ಯ ಜಿಲ್ಲೆಯ ಚಿಟ್ವೇಲ್‌ಗೆ ಸಾಗಬೇಕಿತ್ತು.


              ದೊಡ್ಡ ಮೊತ್ತವನ್ನು ಕೊಡಲಾಗದ ತಂದೆಯು ಸಂಬಂಧಿಕರಿಗೆ ವಿಷಯ ಮುಟ್ಟಿಸಿದ್ದರು. ಅವರು ಮತ್ತೊಂದು ಆಂಬುಲೆನ್ಸ್‌ ಮೂಲಕ ಉಚಿತವಾಗಿ ಮೃತ ದೇಹ ಸಾಗಿಸಲು ವ್ಯವಸ್ಥೆ ಮಾಡಿದ್ದರು. ಆದರೆ, ಆಸ್ಪತ್ರೆಯ ಆಂಬುಲೆನ್ಸ್‌ ಚಾಲಕ ಮತ್ತೊಂದು ವಾಹನದಲ್ಲಿ ಮೃತ ದೇಹವನ್ನು ಸಾಗಿಸಲು ಅವಕಾಶ ಮಾಡಿಕೊಡದೆ, ತನ್ನ ಆಂಬುಲೆನ್ಸ್‌ನಲ್ಲೇ ಸಾಗಿಸುವಂತೆ ಪಟ್ಟು ಹಿಡಿದಿದ್ದರು ಎಂಬ ಆರೋಪಗಳು ಕೇಳಿ ಬಂದಿವೆ.

             ಚಾಲಕನ ಅಮಾನವೀಯ ನಡೆಗೆ ತೀವ್ರ ಬೇಸರಗೊಂಡ ತಂದೆ, ಮಗನ ದೇಹವನ್ನು ಅಪ್ಪಿ ಹಿಡಿದುಕೊಂಡು ಬೈಕ್‌ ಹಿಂಬದಿಯಲ್ಲಿ ಕುಳಿತು ಸಾಗಿದರು. ಯುವಕನೊಬ್ಬ ಬೈಕ್‌ ಚಾಲನೆ ಮಾಡಿರುವುದನ್ನು ವಿಡಿಯೊದಲ್ಲಿ ಕಾಣಬಹುದಾಗಿದೆ.

             ಈ ಘಟನೆಯು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಇಂಥ ಘಟನೆಗಳು ಆಗಾಗ್ಗೆ ನಡೆಯುತ್ತಿರುವುದನ್ನು ಜನರು ಪ್ರಸ್ತಾಪಿಸಿದ್ದಾರೆ. ಆಸ್ಪತ್ರೆಯ ಆಂಬುಲೆನ್ಸ್‌ ಚಾಲಕನ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

            ಆಸ್ಪತ್ರೆಯ ಆಡಳಿತ ಮಂಡಳಿಯು ಆಂಬುಲೆನ್ಸ್‌ ಕಾರ್ಯಾಚರಣೆಯನ್ನು ನಿಲ್ಲಿಸಿ, ಗೌಪ್ಯವಾಗಿ ಖಾಸಗಿ ಆಂಬುಲೆನ್ಸ್‌ ಸೇವಾದಾರರೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಅವರು ಜನರಲ್ಲಿ ಸುಲಿಗೆ ಮಾಡುತ್ತಿದ್ದಾರೆ ಎಂದು ಜನರು ಆರೋಪಿಸಿರುವುದಾಗಿ ವರದಿಯಾಗಿದೆ.

             ವಿರೋಧ ಪಕ್ಷಗಳಾದ ಟಿಡಿಪಿ ಮತ್ತು ಬಿಜೆಪಿ ಆಸ್ಪತ್ರೆಯಲ್ಲಿ ಪ್ರತಿಭಟನೆ ನಡೆಸಿವೆ. ಟಿಡಿಪಿ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ಘಟನೆಯನ್ನು ಖಂಡಿಸಿದ್ದಾರೆ.

           'ಬಡ ತಂದೆಗೆ ಬೇರೆ ದಾರಿ ಇಲ್ಲದೆ ಮಗುವನ್ನು ಬೈಕ್‌ನಲ್ಲಿ 90 ಕಿ.ಮೀ. ದೂರ ಹೊತ್ತೊಯ್ದಿದ್ದಾರೆ. ಈ ಹೃದಯವಿದ್ರಾವಕ ಘಟನೆಯು ರಾಜ್ಯದಲ್ಲಿನ ಆರೋಗ್ಯ ರಕ್ಷಣಾ ಸೌಕರ್ಯಗಳಿಗೆ ಹಿಡಿದಿರುವ ಕನ್ನಡಿಯಾಗಿದೆ. ವೈ.ಎಸ್‌.ಜಗನ್‌ ಮೋಹನ್‌ ರೆಡ್ಡಿ ಆಡಳಿತದಲ್ಲಿ ಆಂಧ್ರ ಪ್ರದೇಶವು ನಲುಗುತ್ತಿದೆ....' ಎಂದು ಚಂದ್ರಬಾಬು ನಾಯ್ದು ಟ್ವೀಟಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries