ಕೋಝಿಕ್ಕೋಡ್: ಕೇರಳದಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಐಐಎಂಎಸ್) ಸ್ಥಾಪಿಸಲು ಕೇಂದ್ರ ಆರೋಗ್ಯ ಸಚಿವಾಲಯ ನಿರ್ಧರಿಸಿದೆ. ಶಿಫಾರಸಿನ ಮೇರೆಗೆ ಸರ್ಕಾರ ಪ್ರಕ್ರಿಯೆ ಚುರುಕುಗೊಳಿಸಿದೆ. ಪ್ರಧಾನ ಕಾರ್ಯದರ್ಶಿ ಭೂಮಿ ಹಸ್ತಾಂತರಕ್ಕೆ ಅಧಿಕಾರ ನೀಡಿ ಆದೇಶ ಹೊರಡಿಸಿದ್ದಾರೆ. ಕೋಝಿಕ್ಕೋಡ್ ಏಮ್ಸ್‍ಗಾಗಿ ಗುರುತಿಸಲಾದ ಕಿನಾಲೂರಿನಲ್ಲಿರುವ ಭೂಮಿಯನ್ನು ಆರೋಗ್ಯ ಇಲಾಖೆಗೆ ಹಸ್ತಾಂತರಿಸಲು ಅನುಮತಿ ನೀಡಲಾಗಿದೆ. ಕೈಗಾರಿಕೆ ಇಲಾಖೆಯ ಭೂಮಿಯನ್ನು ಆರೋಗ್ಯ ಇಲಾಖೆಗೆ ಹಸ್ತಾಂತರಿಸಲಾಗುತ್ತಿದೆ.
ಸಂಸದ ಕೆ ಮುರಳೀಧರನ್ ರಿಗೆ ನೀಡಿದ ಪ್ರತ್ಯುತ್ತರದಲ್ಲಿ ಸಚಿವಾಲಯವು ಕೇರಳದಲ್ಲಿ ಏಮ್ಸ್ ಸ್ಥಾಪಿಸುವ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಇದಕ್ಕೆ ತಾತ್ವಿಕ ಒಪ್ಪಿಗೆಯನ್ನು ಹಣಕಾಸು ಸಚಿವಾಲಯಕ್ಕೆ ಹಸ್ತಾಂತರಿಸಲಾಗಿದೆ. ಹಣಕಾಸು ಸಚಿವಾಲಯ ಮುಂದಿನ ಕ್ರಮ ಕೈಗೊಳ್ಳುತ್ತಿದೆ.
ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವೆ ಭಾರತಿ ಪ್ರವೀಣ್ ಪವಾರ್ ಸ್ಪಷ್ಟಪಡಿಸಿದ್ದಾರೆ. ಕೇರಳಕ್ಕೆ ಏಮ್ಸ್ ಕೇಂದ್ರ ಸರ್ಕಾರಕ್ಕೆ ಸಕ್ರಿಯ ಕಾಳಜಿಯ ವಿಷಯವಾಗಿದೆ. ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಯಡಿ ಎಲ್ಲಾ ರಾಜ್ಯಗಳಲ್ಲಿ ಏಮ್ಸ್ ಸ್ಥಾಪಿಸುವುದು ಕೇಂದ್ರ ಸರ್ಕಾರದ ನೀತಿಯಾಗಿದೆ ಎಂದು ಅವರು ಹೇಳಿದರು. ಈ ಸಂಬಂಧ ಕೇಂದ್ರವು ಕೇರಳಕ್ಕೆ ಪತ್ರ ರವಾನಿಸಿದೆ.
2014ರಲ್ಲಿ ಅಧಿಕಾರಕ್ಕೆ ಬಂದ ನಂತರ ಎನ್‍ಡಿಎ ಸರ್ಕಾರ ಎಲ್ಲ ರಾಜ್ಯಗಳಲ್ಲಿ ಏಮ್ಸ್ ಸ್ಥಾಪಿಸುವುದಾಗಿ ಘೋಷಿಸಿತ್ತು. ಈ ಮಧ್ಯೆ ಕಾಸರಗೋಡಿಗೂ ಏಮ್ಸ್ ಅನುಮತಿಸಲಾಗಿದೆ ಎಂಬ ಸೂಚನೆಗಳು ಕಳೆದ ಕೆಲವು ತಿಂಗಳಿಂದ ಹರಿದಾಡುತ್ತಿದ್ದು, ಆಡಳಿತಾತ್ಮಕ ಸೂಚನೆಗಳು ಯಾವುದೂ ಬಂದಿಲ್ಲ ಎನ್ನಲಾಗಿದೆ. ಜೊತೆಗೆ ಕಾಸರಗೋಡಿಗೆ ಅನುಮತಿಸಲಾಗಿದೆ ಎನ್ನಲಾದ ಏಮ್ಸ್ ನ್ನು ದಕ್ಷಿಣ ಕೇರಳಕ್ಕೆ ಸ್ಥಳಾಂತರಿಸುವ ಮಾತುಗಳು ಕೇಳಿಬಂದಿದ್ದು, ಈ ನಿಟ್ಟಿನಲ್ಲಿ ಕಾಸರಗೋಡಲ್ಲಿ ನಿರಂತರ ಪ್ರತಿಭಟನೆ ವ್ಯಕ್ತವಾಗಿದೆ.