ಮಲಪ್ಪುರಂ: ಬಹುತೇಕ ಕಾಲೇಜುಗಳು ಮಾರ್ಚ್ 31 ರಂದು ಕೊನೆಗೊಳ್ಳುತ್ತದೆ. ಕೊನೆಯ ದಿನವನ್ನು ಕಾಲೇಜು ದಿನ ಮತ್ತು ಕಲಾ ದಿನ ಎಂದೂ ಹಲವೆಡೆ ಆಚರಿಸಲಾಗುತ್ತದೆ. ಆದರೆ ಕಲಾ ದಿನದಂದು ವಿದ್ಯಾರ್ಥಿಗಳು ಪ್ರಾಂಶುಪಾಲರು ಮತ್ತು ಶಿಕ್ಷಕರನ್ನು ದಿಗ್ಬಂಧನದಲ್ಲಿರಿಸಿದ ಘಟನೆ ನಡೆದಿದೆ.
ವಿದ್ಯಾರ್ಥಿಗಳು ಶಿಕ್ಷಕರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿ ಖಂಡಿಸಿದರು. ಬಳಿಕ ಕಲಾ ದಿನಾಚರಣೆ ನಡೆಸಲು ಅನುಮತಿ ನೀಡಿದ್ದು, ಕಾಲೇಜು ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡಿ ಕೊನೆಗೆ ಆಟ್ರ್ಸ್ ಡೇ ನಡೆಸದೆ ವಂಚಿರುವುದಾಗಿ ವಿದ್ಯಾರ್ಥಿಗಳು ಅವಲತ್ತುಕೊಂಡಿದ್ದಾರೆ. ಮಲಪ್ಪುರಂನ ವಳಯಂಕುಳಂ ಅಸ್ಸಾಬಾಹ್ ಕಾಲೇಜಿನಲ್ಲಿ ಪ್ರತಿಭಟನೆ ನಡೆದಿದೆ.
ಸೆಮಿಸ್ಟರ್ ಆರಂಭದಲ್ಲಿ ಆಟ್ರ್ಸ್ ಡೇ ಹೆಸರಲ್ಲಿ ಕಾಲೇಜು ಅಧಿಕಾರಿಗಳು 300 ರೂ.ವಸೂಲು ಮಾಡಿದ್ದರು. ಹೀಗಾಗಿ ಎರಡು ಸೆಮಿಸ್ಟರ್‍ಗಳಲ್ಲಿ ಹಣ ಸಂದಾಯವಾಗಿದೆ. ಕೊನೆಗೂ ದಿನ ಬಂದಾಗ ಇಲ್ಲಿ ಸಂಭ್ರಮಾಚರಣೆ ಇರುವುದಿಲ್ಲ ಎಂದು ಕಾಲೇಜು ಅಧಿಕಾರಿಗಳು ತಿಳಿಸಿದ್ದರು. ಇದರಿಂದ ವಿದ್ಯಾರ್ಥಿಗಳು ಶಿಕ್ಷಕರು ಹಾಗೂ ಪ್ರಾಂಶುಪಾಲರಿಗೆ ಬೀಗ ಜಡಿದು ದಿಗ್ಬಂಧನಗೈದರು.
ಸುಮಾರು ಐನೂರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಕಾರ್ಯಕ್ರಮ ನಡೆಯದಿದ್ದರೆ ಸಂಗ್ರಹಿಸಿದ ಹಣವನ್ನು ವಾಪಸ್ ಕೊಡುವ ಸೌಜನ್ಯವನ್ನಾದರೂ ತೋರಿಸಬೇಕು ಎಂಬುದು ವಿದ್ಯಾರ್ಥಿಗಳ ಒಕ್ಕೊರಲ ಅಭಿಪ್ರಾಯ. ಕಾಲೇಜಿನ ಎರಡು ಗೇಟ್‍ಗಳಿಗೆ ಒಳಗಿನಿಂದ ಬೀಗ ಹಾಕಿ ಪ್ರತಿಭಟನೆ ನಡೆಸಿದರು. ಪೋಲೀಸರ ಸಮ್ಮುಖದಲ್ಲಿ ಒಮ್ಮತಕ್ಕೆ ಬಂದ ನಂತರ ವಿದ್ಯಾರ್ಥಿಗಳ ಪ್ರತಿಭಟನೆ ಕೊನೆಗೊಂಡಿತು.