ಉಪ್ಪಳ: ಸಮಾಜದ ಏಳಿಗೆಯಲ್ಲಿ ದೇಗುಲಗಳು ಪ್ರಧಾನ ಭೂಮಿಕೆಯನ್ನು ವಹಿಸುತ್ತವೆ. ಸತ್ ಸಮಾಜವನ್ನು ನಿರ್ಮಿಸುವ ಶಕ್ತಿ ಆರಾಧನಾಲಯಗಳಿಗಿದೆ ಎಂದು ಪೈವಳಿಕೆ ಗ್ರಾ.ಪಂ ಅಧ್ಯಕ್ಷೆ ಜಯಂತಿ.ಕೆ ನುಡಿದರು.
ಬಾಯಾರು ಸಮೀಪದ ವಾಟೆತ್ತಿಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಪುನರ್ ನವೀಕರಣ ಮತ್ತು ಬ್ರಹ್ಮಕಲಶೋತ್ಸವದ ಅಂಗವಾಗಿ ಜರಗಿದ ಸಾಂಸ್ಕೃತಿಕ ಕಲಾ ವೇದಿಕೆಯನ್ನು ಪೂವರಿ ಅರಳಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ದೇಗುಲದ ಜೀರ್ಣೋದ್ಧಾರ ಕಾರ್ಯದಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರೂ ಧನ್ಯರು ಎಂದರು. ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಗ್ರಾ.ಪಂ ಉಪಾಧ್ಯಕ್ಷೆ ಪುಷ್ಪಾಲಕ್ಷ್ಮೀ ಮಾತನಾಡಿ ದೇಗುಲಗಳು ಸಂಸ್ಕೃತಿಯ ಅವಿಭಾಜ್ಯ ಅಂಗ. ಧರ್ಮ ಮತ್ತು ಸಂಸ್ಕೃತಿ ಭಾರತೀಯ ಸಮಾಜದ ಅವಿಭಾಜ್ಯ ಅಂಗಗಳು. ಶ್ರೀ ದೇಗುಲದ ಬ್ರಹ್ಮಕಲಶದ ಕಾರ್ಯದಲ್ಲಿ ತೊಡಗಿಕೊಂಡು ಕಿಂಚಿತ್ ಸೇವೆ ಮಾಡಿದ್ದಕ್ಕೆ ಅಪಾರ ಆನಂದವಿದೆ. ದೇಗುಲಗಳ ಪುನರ್ ನವೀಕರಣದ ಮೂಲಕ ಸಮಾಜದಲ್ಲಿ ಸತ್ಯ ಮತ್ತು ಧರ್ಮದ ಪ್ರಜ್ಞೆ ಮೂಡಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಆವಳಮಠ ಗಣಪತಿ ಭಟ್, ಮಾನ್ಯಂತಾಯ ಶ್ರೀನಿವಾಸ ಭಟ್ ಸುದೆಂಬಳ ಶುಭ ಹಾರೈಸಿದರು. ದೇಗುಲದ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಶ್ರೀಕಾಂತ. ವಿ. ಪ್ರಸ್ತಾವಿಕ ಭಾಷಣ ಮಾಡಿ ಗಣ್ಯರನ್ನು ಸ್ವಾಗತಿಸಿದರು. ಈ ಸಂದರ್ಭ ಹಿರಿಯರಾದ ಮಾಧವ ಭಟ್, ಪಾರ್ವತಿ ಅಮ್ಮ ವಾಟೆತ್ತಿಲ, ಬ್ರಹ್ಮಕಲಶ ಸಮಿತಿ ಕಾರ್ಯಾಧ್ಯಕ್ಷರಾದ ವಿಘ್ನೇಶ್ವರ ಕೆದುಕೋಡಿ ಇದ್ದರು. ಸಮಿತಿಯ ಉಪಾಧ್ಯಕ್ಷರಾದ ಸದಾಶಿವ ಚೇರಾಲು ಧನ್ಯವಾದಗೈದರು. ಕಾರ್ಯಕ್ರಮದ ಕೊನೆಯಲ್ಲಿ ಗಣ್ಯರಿಗೆ ಸ್ಮರಣಿಕೆ ಮತ್ತು ಶ್ರೀದೇವರ ಪ್ರಸಾದ ನೀಡಿ ಗೌರವಿಸಲಾಯಿತು. ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪೆÇನ್ನೆತ್ತೋಡು ಮಹಿಳಾ ಯಕ್ಷಕೂಟದ ವತಿಯಿಂದ ಯಕ್ಷಗಾನ ತಾಳಮದ್ದಳೆ- ಕೃಷ್ಣಾರ್ಜುನ ಕಾಳಗ, ಭಿಡೆ ಸಹೋದರಿಯರು ಕಲ್ಮಂಜ ಇವರಿಂದ ನೃತ್ಯ ಕಾರ್ಯಕ್ರಮ ಏರ್ಪಟ್ಟಿತು.