ಮುಂಬೈ: ಮುಖ್ಯಮಂತ್ರಿ ಉದ್ದವ್ ಠಾಕ್ರೆ ನಿವಾಸದ ಹೊರಗಡೆ ಹನುಮಾನ್ ಚಾಲೀಸಾ ಪಠಿಸುವುದಾಗಿ ಹೇಳಿ ನಂತರ ಅದನ್ನು ಕೈಬಿಟ್ಟಿದ್ದ ಅಮರಾವತಿ ಸಂಸದೆ ನವನೀತ್ ರಾಣಾ ಮತ್ತು ಆಕೆಯ ಪತಿ ಶಾಸಕ ರವಿ ರಾಣಾ ನೋಡಲು ಅಮಾಯಕರಂತೆ ಕಾಣಬಹುದು ಆದರೆ, ಇದೊಂದು ದೊಡ್ಡ ಪಿತೂರಿ ಆಗಿದೆ ಎಂದು ಮುಂಬೈ ಪೊಲೀಸರು ಶುಕ್ರವಾರ ವಿಶೇಷ ನ್ಯಾಯಾಲಯವೊಂದಕ್ಕೆ ಹೇಳಿದ್ದಾರೆ.
ಮುಖ್ಯಮಂತ್ರಿ ಉದ್ದವ್ ಠಾಕ್ರೆ ಹಿಂದೂ ವಿರೋಧಿ ಅಂತಾ ಬಿಂಬಿಸುವ ವಾತಾವರಣ ಸೃಷ್ಟಿಯಂತಹ ಪ್ರಯತ್ನಗಳು ಪ್ರತಿಪಕ್ಷ ಬಿಜೆಪಿ ಮತ್ತು ಇತರ ಅವರ ರಾಜಕೀಯ ಎದುರಾಳಿಗಳು ಮಾಡುತ್ತಿದ್ದಾರೆ. ಪ್ರಸ್ತುತ ಹಿಂದೂ ಧರ್ಮದವರು ಮುಕ್ತವಾಗಿ ತಮ್ಮ ಆಚರಣೆಗಳನ್ನು ನಡೆಸಲು ಕಷ್ಟವಾಗುತ್ತಿದೆ. ಹೀಗೆ ಮುಸ್ಲಿಂರ ವಿರುದ್ದ ದ್ವೇಷಕಾರಿ ಭಾವನೆ ಹೆಚ್ಚಿಸಿ ಬಿರುಕು ಮೂಡಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರದೀಪ್ ಘಾರಟ್ ಮೂಲಕ ಈ ರೀತಿ ಅಫಿಡವಿಟ್ ಸಲ್ಲಿಸಿರುವ ಪೊಲೀಸರು, ದೇಶ ದ್ರೋಹ ಮತ್ತಿತರ ಕಾರಣಗಳಿಂದ ಏಪ್ರಿಲ್ 23 ರಂದು ಬಂಧಿತರಾಗಿರುವ ರಾಣಾ ದಂಪತಿಗೆ ಜಾಮೀನು ನೀಡಲು ವಿರೋಧ ವ್ಯಕ್ತಪಡಿಸಿದ್ದಾರೆ.
ರಾಣಾ ದಂಪತಿ ಜಾಮೀನು ಅರ್ಜಿ ವಿಚಾರಣೆಯನ್ನು ನಾಳೆ ನಡೆಸುವುದಾಗಿ ವಿಶೇಷ ನ್ಯಾಯಾಧೀಶ ಆರ್. ಎನ್. ರೊಕಾಡೆ ಹೇಳಿದ್ದಾರೆ. ನವನೀತ್ ಹಾಗೂ ರವಿ ರಾಣಾ ದಂಪತಿ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಒಂದು ವೇಳೆ ಜಾಮೀನಿನ ಮೇರೆಗೆ ಅವರು ಹೊರಗೆ ಬಂದರೆ ಸಾಕ್ಷ್ಯಗಳನ್ನು ತಿರುಚಲಾಗುತ್ತದೆ ಅಥವಾ ಸಾಕ್ಷಿದಾರರ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿರುತ್ತದೆ. ಆರೋಪಿಗಳು ಮುಂಬೈನಲ್ಲಿ ಖಾಯಂ ನಿವಾಸ ಹೊಂದಿಲ್ಲ, ಒಂದು ವೇಳೆ ಜಾಮೀನು ಸಿಕ್ಕರೆ ವಿಚಾರಣೆ ಮತ್ತು ತನಿಖೆ ಅವರು ಸಿಕ್ಕಲ್ಲ ಎಂದು ಪೊಲೀಸರು ಹೇಳಿದ್ದಾರೆ.