ಕಾಸರಗೋಡು: ಕಾಳಸಂತೆ ಹಾಗೂ ಅತಿಯಾದ ಬೆಲೆ ವಸೂಲಿ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ಅವರು ಕಾಸರಗೋಡು ನಗರದ ಅಂಗಡಿಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿದರು. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ಮಾತನಾಡಿ, ಕಾಳಸಂತೆ, ಕಾಳಧನ ಮತ್ತು ಹಣದುಬ್ಬರ ಕಟ್ಟುನಿಟ್ಟಾಗಿ ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕ ಮಾರುಕಟ್ಟೆಯಲ್ಲಿ ಅನಿಯಂತ್ರಿತ ಬೆಲೆ ಏರಿಕೆಗೆ ಅವಕಾಶ ನೀಡುವುದಿಲ್ಲ. ಜಿಲ್ಲೆಯ ವ್ಯಾಪಾರಿ ಸಂಸ್ಥೆಗಳಲ್ಲಿ ತಪಾಸಣೆ ಚುರುಕುಗೊಳಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ನೇತೃತ್ವದಲ್ಲಿ ದಿನಸಿ ಅಂಗಡಿ, ತರಕಾರಿ ಅಂಗಡಿ, ಮಾಂಸದಂಗಡಿ, ಮೀನು ಮಾರುಕಟ್ಟೆ, ಹೋಟೆಲ್‍ಗಳಲ್ಲಿ ತಪಾಸಣೆ ನಡೆಸಲಾಯಿತು. ತಪಾಸಣೆ ಮಧ್ಯೆ ನಗರದ ಕೆಲವು ಅಂಗಡಿಗಳಲ್ಲಿ ಈರುಳ್ಳಿಗೆ 22 ರೂ. ಇನ್ನು ಕೆಲವೆಡೆ 26 ರೂ.ನಂತೆ ದರವ್ಯತ್ಯಾಸವಿರುವುದನ್ನು ಪತ್ತೆಹಚ್ಚಲಾಗಿದೆ. ಜಿಲ್ಲಾಧಿಕಾರಿ ದಾಳಿನಡೆಸಿದ ವ್ಯಾಪಾರಿ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ನಾಗರಿಕ ಪಊರೈಕೆ ಅಧಿಕಾರಿಗೆ ಸೂಚನೆ ನೀಡಿದರು. ತಪಾಸಣೆಯನ್ನು ಬಲಪಡಿಸಲು ಎಲ್ಲೆಡೆ ಜಂಟಿ ಸ್ಕ್ವಾಡ್‍ಗಳನ್ನು ರಚಿಸಲಾಗುವುದು.
ಜಿಲ್ಲಾ ಸರಬರಾಜು ಅಧಿಕಾರಿ ಕೆ.ಪಿ.ಅನಿಲ್‍ಕುಮಾರ್, ತಾಲೂಕು ಪೂರೈಕೆ ಅಧಿಕಾರಿಗಳಾದ ಕೆ.ಎನ್.ಬಿಂದು, ಸಜಿಕುಮಾರ್, ಎಂ.ಜಯಪ್ರಕಾಶ್, ಪಡಿತರ ನಿರೀಕ್ಷಕರಾದ ಎಸ್.ಬಿಂದು, ಪಿ.ವಿ.ಶ್ರೀನಿವಾಸ್, ಟಿ.ರಾಧಾಕೃಷ್ಣನ್ ತಪಾಸಣಾ ತಂಡದಲ್ಲಿದ್ದರು. ತಾಲೂಕು ಮಟ್ಟದಲ್ಲಿ ಸ್ಕ್ವಾಡ್‍ಗಳ ರಚನೆ ಮತ್ತು ತಪಾಸಣೆಈ ಪ್ರಕ್ರಿಯೆ ಮುಂದುವರಿಸುವಂತೆ ಜಿಲ್ಲಾಧಿಕಾರಿಗಳು ಜಿಲ್ಲಾ ಪೂರೈಕೆ ಅಧಿಕಾರಿಗಳಿಗೆ ಸೂಚಿಸಿದರು. ಈಸ್ಟರ್, ರಂಜಾನ್, ವಿಷು ಮತ್ತಿತರ ಹಬ್ಬಗಳ ಸಂದರ್ಭದಲ್ಲಿ ಸಾರ್ವಜನಿಕ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.