ಲಖನೌ: ಸಲಿಂಗ ವಿವಾಹ ಪ್ರವೃತ್ತಿಯನ್ನು ವಿರೋಧಿಸಿರುವ ಉತ್ತರ ಪ್ರದೇಶ ಸರ್ಕಾರ, ಇಂತಹ ವಿವಾಹಗಳು ಭಾರತೀಯ ಸಂಸ್ಕೃತಿ ಮತ್ತು ದೇಶದಲ್ಲಿ ಸಹಬಾಳ್ವೆ ನಡೆಸುತ್ತಿರುವ ವಿವಿಧ ಧರ್ಮಗಳಿಗೆ ವಿರುದ್ಧವಾಗಿದೆ ಎಂದು ಹೇಳಿದೆ.
ಹಿಂದೂ ವಿವಾಹ ಕಾಯ್ದೆ ಸಲಿಂಗ ವಿವಾಹವನ್ನು ವಿರೋಧಿಸುವುದಿಲ್ಲ. ಹೀಗಾಗಿ ತಮ್ಮ ವಿವಾಹವನ್ನು ಮಾನ್ಯ ಮಾಡಬೇಕು ಎಂದು ಇಬ್ಬರು ಲೆಸ್ಬಿಯನ್ ಮಹಿಳೆಯರು ಮಾಡಿದ ಮನವಿಯನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿದೆ.
ಈ ಮಹಿಳೆಯರ ಮನವಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಉತ್ತರ ಪ್ರದೇಶ ಸರ್ಕಾರದ ಪರ ವಕೀಲರು, ವಿವಾಹ ಗಂಡು ಮತ್ತು ಹೆಣ್ಣಿನ ಅಸ್ತಿತ್ವಕ್ಕೆ ಸಂಬಂಧಿಸಿದ ಪರಿಕಲ್ಪನೆಯ ಮೇಲೆ ವಿನ್ಯಾಸಗೊಳಿಸಲಾಗಿದೆ. ಭಾರತೀಯ ಕಾನೂನುಗಳ ಅಡಿಯಲ್ಲಿ ಇಂತಹ ವಿವಾಹಗಳು ಅಮಾನ್ಯವೆಂದು ಪರಿಗಣಿಸಬೇಕು ಎಂದು ಮನವಿ ಮಾಡಿದರು.
ರಾಜ್ಯ ಸರ್ಕಾರದ ಮನವಿಯನ್ನು ಪರಿಗಣಿಸಿದ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಅವರು, ಸಲಿಂಗ ವಿವಾಹವನ್ನು ಮಾನ್ಯಮಾಡಬೇಕು ಎಂಬ ಮನವಿಯನ್ನು ತಿರಸ್ಕರಿಸಿದ್ದಾರೆ.
ಲೆಸ್ಬಿಯನ್ ಸಂಬಂಧದಲ್ಲಿರುವ ತನ್ನ 23 ವರ್ಷದ ಮಂಗಳನ್ನು ತಮ್ಮ ವಶಕ್ಕೆ ಕೊಡಿಸಬೇಕು ಎಂದು ತಾಯಿ ಅಂಜು ದೇವಿ ಎಂಬುವವರು ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಏಪ್ರಿಲ್ 7ರಂದು ಕೋರ್ಟ್ ಗೆ ಹಾಜರಾದ ಅಂಜು ದೇವಿ ಮಗಳು ಹಾಗೂ 22 ವರ್ಷದ ಯುವತಿ, ತಾವು ಇಬ್ಬರು ಮದುವೆಯಾಗಿದ್ದು, ತಮ್ಮ ಮದುವೆ ಮಾನ್ಯ ಮಾಡಬೇಕು ಎಂದು ಕೋರಿದ್ದರು.