ನವದೆಹಲಿ: ಸುಮಾರು ಹನ್ನೆರಡು ವರ್ಷಗಳ ಹಿಂದೆ ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ ಕಟ್ಟಡವನ್ನು ಖರೀದಿಸಿದ ಸಂಬಂಧ ಗುರುವಾರ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ಎನ್‌ಸಿ ಪಕ್ಷದ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಅವರನ್ನು ಜಾರಿ ನಿರ್ದೇಶನಾಲಯವು ಪ್ರಶ್ನಿಸಿದೆ.
'ನವದೆಹಲಿಯ ಜಾರಿ ನಿರ್ದೇಶನಾಲಯದ ಪ್ರಧಾನ ಕಚೇರಿಗೆ ಗುರುವಾರ ಬೆಳಿಗ್ಗೆ ಹಾಜರಾದ ಒಮರ್ ಅಬ್ದುಲ್ಲಾ ಅವರಿಂದ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಯಿತು' ಎಂದು ಅಧಿಕಾರಿಗಳು ತಿಳಿಸಿದರು.
ಈ ವರ್ಷದ ಆರಂಭದಲ್ಲಿ ಕಟ್ಟಡ ಖರೀದಿ ಸಂಬಂಧ ಜಾರಿ ನಿರ್ದೇಶನಾಲಯವು ಪ್ರಕರಣ ದಾಖಲಿಸಿಕೊಂಡಿತ್ತು.
ಎದುರಾಳಿ ಪಕ್ಷಗಳ ಮಟ್ಟಹಾಕಲು ಬಿಜೆಪಿ ಅಧಿಕಾರ ದುರ್ಬಳಕೆ:
ಜಾರಿ ನಿರ್ದೇಶನಾಲಯದ ಕ್ರಮವನ್ನು ಖಂಡಿಸಿರುವ ನ್ಯಾಷನಲ್ ಕಾನ್ಫರೆನ್ಸ್ ಪಕ್ಷವು, '12 ವರ್ಷಗಳ ಹಿಂದಿನ ಕಟ್ಟಡ ಖರೀದಿ ಸಂಬಂಧ ಪಕ್ಷದ ನಾಯಕ ಒಮರ್ ಅಬ್ದುಲ್ಲಾ ಅವರನ್ನು ಪ್ರಶ್ನಿಸಿರುವ ಜಾರಿ ನಿರ್ದೇಶನಾಲಯದ ಕ್ರಮವು ಅನೈತಿಕ ಹಾಗೂ ದ್ವೇಷಪೂರಿತ. ಕೇಂದ್ರ ತನಿಖಾ ಸಂಸ್ಥೆಯ ಮುಂದುವರೆದ ದುರ್ಬಳಕೆ' ಎಂದು ಟೀಕಿಸಿದೆ.
'ಈ ಹಿಂದೆ ಚುನಾವಣಾ ಆಯೋಗವು ಚುನಾವಣೆಗಳನ್ನು ಘೋಷಿಸುವ ಸಂದರ್ಭವಿತ್ತು. ಆದರೆ ಈಗ ಜಾರಿ ನಿರ್ದೇಶನಾಲಯವು ಚುನಾವಣೆಗಳನ್ನು ಘೋಷಿಸಿದಂತಿದೆ' ಎಂದು ಕೇಂದ್ರ ಸರ್ಕಾರದ ವಿರುದ್ಧ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ವಕ್ತಾರರು ವಾಗ್ದಾಳಿ ನಡೆಸಿದ್ದಾರೆ.
'ಇತ್ತೀಚಿನ ವರ್ಷಗಳಲ್ಲಿ ಎಲ್ಲೆಲ್ಲಿ ಚುನಾವಣೆಗಳು ಘೋಷಣೆಯಾಗುವ ರಾಜ್ಯಗಳಲ್ಲಿ ಬಿಜೆಪಿಗೆ ಪ್ರಬಲ ಎದುರಾಳಿಯಾಗುವ ಪಕ್ಷಗಳನ್ನು ಗುರಿಯಾಗಿಸಿಕೊಂಡು ಇ.ಡಿ ದಾಳಿ ನಡೆಸಲಾಗುತ್ತಿದೆ. ಎದುರಾಳಿ ಪಕ್ಷಗಳನ್ನು ಮಟ್ಟಹಾಕುವ ತನ್ನ ರಾಜಕೀಯ ಉದ್ದೇಶಕ್ಕಾಗಿ ಸ್ವಾಯತ್ತ ಸಂಸ್ಥೆಗಳಾದ ಇ.ಡಿ., ಸಿಬಿಐ,ಎನ್‌ಐಎ ಹಾಗೂ ಎನ್‌ಸಿಬಿಗಳನ್ನು ಬಿಜೆಪಿ ಬಳಸಿಕೊಳ್ಳುತ್ತಿದೆ' ಎಂದು ಹೇಳಿಕೆಯಲ್ಲಿ ಆರೋಪಿಸಿದ್ದಾರೆ.