ಕಣ್ಣೂರು: ಸಿಪಿಎಂ ನಾಯಕಿ ಹಾಗೂ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಎಂ.ಸಿ.ಜೋಸೆಫೀನ್ (74) ಭಾನುವಾರ ನಿಧನರಾದರು. ಶನಿವಾರ ಪಕ್ಷದ ರಾಷ್ಟ್ರ ಸಮ್ಮೇಳನ(ಕಾಂಗ್ರೆಸ್) ವೇದಿಕೆಯಲ್ಲಿ ಕುಸಿದು ಬಿದ್ದ ಅವರನ್ನು ಎಕೆಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಭಾನುವಾರ ಮಧ್ಯಾಹ್ನ ಕೊನೆಯುಸಿರೆಳೆದರು.
ಇವರ ಪತಿ ದಿ. ಪಳ್ಳಿಪಟ್ಟು ಪಿಎ ಮಥಾಯಿ, ಸಿಐಟಿಯು ಅಂಗಮಾಲಿ ಏರಿಯಾ ಕಾರ್ಯದರ್ಶಿಯಾಗಿದ್ದರು. ಮೃತರು ಪುತ್ರ ಮನು ಪಿ ಮಥಾಯಿ. ಸೊಸೆ: ಜ್ಯೋತ್ಸನಾ. ಮೊಮ್ಮಕ್ಕಳು: ಮಾನವ್ ವ್ಯಾಸ್ ಮತ್ತು ಕನ್ನಕಿ ವ್ಯಾಸ್ ಅವರನ್ನು ಅಗಲಿದ್ದಾರೆ.
ಜೋಸೆಫೀನ್ ಅವರು ವಿದ್ಯಾರ್ಥಿ-ಯುವ-ಮಹಿಳೆಯರ ಆಂದೋಲನದ ಮೂಲಕ ಸಾರ್ವಜನಿಕ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು. 1978 ರಲ್ಲಿ ಅವರು ಸಿಪಿಐ (ಎಂ) ಸೇರಿದರು. 1984 ರಲ್ಲಿ ಅವರು ಸಿಪಿಐ (ಎಂ) ಎರ್ನಾಕುಳಂ ಜಿಲ್ಲಾ ಸಮಿತಿಯ ಸದಸ್ಯರಾದರು. 1987ರಲ್ಲಿ ರಾಜ್ಯ ಸಮಿತಿ ಸೇರಿದರು. ಅವರು 2002 ರಿಂದ ಕೇಂದ್ರ ಸಮಿತಿಯ ಸದಸ್ಯರಾಗಿದ್ದಾರೆ.
1996ರಲ್ಲಿ ಜೋಸೆಫೀನ್ ಮಹಿಳಾ ಸಂಘದ ಅಖಿಲ ಭಾರತ ಉಪಾಧ್ಯಕ್ಷೆಯಾದರು. ರಾಜ್ಯ ಉಗ್ರಾಣ ನಿಗಮದ ನೌಕರರ ಸಂಘದ (ಸಿಐಟಿಯು) ಕಾರ್ಯದರ್ಶಿ ಹಾಗೂ ಖಾಸಗಿ ಆಸ್ಪತ್ರೆ ಕಾರ್ಮಿಕರ ಸಂಘದ (ಸಿಐಟಿಯು) ಅಧ್ಯಕ್ಷರಾಗಿದ್ದರು. ಅಂಗಮಾಲಿ (1987) ಮತ್ತು ಮಟ್ಟಂಚೇರಿ (2011) ವಿಧಾನಸಭಾ ಕ್ಷೇತ್ರಗಳಿಗೆ ಮತ್ತು 1989 ರಲ್ಲಿ ಇಡುಕ್ಕಿ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿದ್ದರು.
2017 ರಿಂದ 2021 ರವರೆಗೆ ಅವರು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾಗಿದ್ದರು. ಜೋಸೆಫೀನ್ ಅವರು ಅಖಿಲ ಭಾರತ ಪ್ರಜಾಸತ್ತಾತ್ಮಕ ಮಹಿಳಾ ಸಂಘದ ಉಪಾಧ್ಯಕ್ಷೆ ಹಾಗೂ ರಾಜ್ಯಾಧ್ಯಕ್ಷೆ, ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಹಾಗೂ ಬೃಹತ್ ಕೊಚ್ಚಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆಯಾಗಿದ್ದರು.