ಮಂಜೇಶ್ವರ: ಮಂಜೇಶ್ವರ ಸಮೀಪದ ಉದ್ಯಾವರದಲ್ಲಿ ಉದ್ಯಾವರ ಶ್ರೀ ಅರಸು ಮಂಜಿಷ್ಣಾರ್ ದೈವ ಪಾತ್ರಿಗಳು, ಕ್ಷೇತ್ರ ಪದಾಧಿಕಾರಿಗಳು ಹಾಗೂ ಗುರಿಕ್ಕಾರರು ಉದ್ಯಾವರ ಸಾವಿರ ಜಮಾಯತಿಗೆ ಸಾಂಪ್ರದಾಯಿಕ ಭೇಟಿ ನೀಡಿ ಉತ್ಸವಕ್ಕೆ ಆಹ್ವಾನವನ್ನು ನೀಡುವ ಆಚರಣೆ ಶುಕ್ರವಾರ ಮಧ್ಯಾಹ್ನ ನಡೆಯಿತು.
ಹಿಂದೂ ಮುಸ್ಲಿಂ ಭಾವೈಕ್ಯದ ಸಂಕೇತದೊಂದಿಗೆ ಕಳೆದ 800 ವರ್ಷಗಳಿಂದ ವಾಡಿಕೆಯಲ್ಲಿರುವ ಉದ್ಯಾವರ ಶ್ರೀಅರಸು ದೈವಗಳು ವಷರ್ಂಪ್ರತಿಯ ಪದ್ದತಿಯಂತೆ ಶುಕ್ರವಾರ ಮಧ್ಯಾಹ್ನ ಅರಸು ದೈವ ಪಾತ್ರಿಗಳು ಮತ್ತು ದೇವಸ್ಥಾನದ ಪ್ರತಿನಿಧಿಗಳು ಹಾಗೂ ಸಹಸ್ರಾರು ಹಿಂದೂ ಬಾಂಧವರು ಉದ್ಯಾವರ ಸಾವಿರ ಜಮಾಯತ್‍ಗೆ ಭೇಟಿ ನೀಡಿದರು.
ಈ ಸಂದರ್ಭ ಮಂಜೇಶ್ವರ ಶಾಸಕ ಎ ಕೆ ಎಂ ಅಶ್ರಫ್, ಮಸೀದಿ ಅಧ್ಯಕ್ಷ ಸೈಪುಲ್ಲಾ ತಂಙಳ್, ಕಾರ್ಯದರ್ಶಿ ಇಬ್ರಾಹಿಂ ಸೇರಿದಂತೆ ಹಲವರು ಕ್ಷೇತ್ರದಿಂದ ಆಗಮಿಸಿದವರನ್ನು ಬರಮಾಡಿ ಕೊಂಡರು.
ಈ ಸಂದರ್ಭ ಕೇರಳ ರಾಜ್ಯ ಜಂಮೀಯತುಲ್ ಉಲಮಾ ಅಧ್ಯಕ್ಷ ಹಾಗೂ ಉದ್ಯಾವರ ಸಾವಿರ ಜಮಾಯತ್ ಖಾಝಿಯೂ ಆದ ಸಯ್ಯದ್ ಮೊಹಮ್ಮದ್ ಜಿಫ್ರಿ ಮುತ್ತುಕೋಯ ತಂಠಳ್ ಅವರು ಮಾತನಾಡಿ, ದೇಶದಾದ್ಯಂತ ಕೋಮು ವಿಷಬೀಜ ಬಿತ್ತುವ ಹಾಗೂ ಸೌಹಾರ್ಧತೆಯನ್ನು ಕೆಡಿಸುವವರಿಗೆ ಇದೊಂದು ಮಾದರಿಯಾಗಿದೆ. ಉದ್ಯಾವರ ಸಾವಿರ ಜಮಾಯತ್ ಇಂದು ಅರಸು ಮಂಜಿಷ್ಣಾರು ಕ್ಷೇತ್ರದವರಿಗೆ ಸಾಂಪ್ರದಾಯಿಕ ಅದ್ದೂರಿಯ ಸ್ವಾಗತವನ್ನು ನೀಡಿದೆ. ಎಲ್ಲಾ ಕಡೆಯಲ್ಲೂ ಇದು ಮುಂದುವರಿಯಬೇಕಾಗಿದೆ ಎಂದು ಹೇಳಿದರು.
ಉದ್ಯಾವರ ಅರಸು ಮಂಜಿಷ್ಣಾರ್ ಕ್ಷೇತ್ರದ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಪ್ರಾಚೀನ ಕಾಲದಿಂದಲೇ ಆಚರಿಸಿಕೊಂಡು ಬರುತ್ತಿರುವ ಅರಸು ದೈವಗಳ ಜಮಾಯತ್ ಭೇಟಿ ಇಂದಿಗೂ ಹಿಂದೂ, ಮುಸ್ಲಿಂ ಭಾವೈಕ್ಯದ ಪ್ರತೀಕವಾಗಿದೆ.
ಮೇಷ ಸಂಕ್ರಮಣ ಕಳೆದು ಬರುವ ಮೊದಲ ಶುಕ್ರವಾರ ಈ ಅನುಷ್ಠಾನ ವಾಡಿಕೆಯಾಗಿದೆ. ಈ ಬಾರಿ ಎರಡನೇ ಶುಕ್ರವಾರ ಮಧ್ಯಾಹ್ನ ಉದ್ಯಾವರ ಕ್ಷೇತ್ರದ ಭಂಡಾರ ಮನೆಯಿಂದ ಹೊರಟ ದೈವಗಳು 1.30ರ ಹೊತ್ತಿಗೆ ಜಮಾಯತ್‍ಗೆ ತಲುಪಿದವು. ಈ ವೇಳೆ ಜುಮಾ ನಮಾಜ್ ಮುಗಿಸಿ ಸಜ್ಜಾಗಿ ನಿಂತಿದ್ದ ಮಸೀದಿಯ ಆಡಳಿತ ಸಮಿತಿ ಪ್ರತಿನಿಧಿಗಳು ಹಾಗೂ ಸಹಸ್ರಾರು ಮುಸ್ಲಿಂ ಬಾಂಧವರು ಪರಂಪರಾಗತ ರೀತಿಯಲ್ಲಿ ಉದ್ಯಾವರ ಅರಸು ದೈವ ಪಾತ್ರಿಗಳಿಗೆ ಅದ್ದೂರಿ ಸ್ವಾಗತ ನೀಡಿದರು. ದೈವ ಪಾತ್ರಿಗಳು ಜಮಾಯತಿನೊಳಗೆ ಪ್ರವೇಶಿಸಿ ಮಸೀದಿ ಮುಂಭಾಗದಲ್ಲಿ ಜಮಾಯತಿನ ಸರ್ವ ಮುಸ್ಲಿಂ ಬಾಂಧವರನ್ನು ಕೂಡ ಮಾಡ ಅರಸು ದೈವಗಳ ಜಾತ್ರೋತ್ಸವಕ್ಕೆ ಆಹ್ವಾನವಿತ್ತರು. ಮೇ 9 ರಿಂದ 14 ರ ತನಕ ಮಾಡ ಶ್ರೀಕ್ಷೇತ್ರದ ಉತ್ಸವಕ್ಕೆ ಸಾವಿರ ಜಮಾಯತ್ ವ್ಯಾಪ್ತಿಯಲ್ಲಿರುವ ಮುಸ್ಲಿಂ ಬಾಂಧವರು ಕೂಡ ಪಾಲ್ಗೊಳ್ಳುವ ಮೂಲಕ ಹಿಂದೂ, ಮುಸ್ಲಿಂ ಭಾವೈಕ್ಯತೆಯ ಕೊಂಡಿಯಾಗಿ ಮುಂದುವರಿದಿದೆ.
ಕಾರ್ಣಿಕದ ಉದ್ಯಾವರ ಕ್ಷೇತ್ರದ ಜಾತ್ರೆ ನಡೆಯುವ ನೇಮೋತ್ಸವದ ದಿನದಂದು ಜಮಾಯತ್‍ನ ಸದಸ್ಯರುಗಳು ಕೂರಲು ದೇವಸ್ಥಾನದ ಕಟ್ಟೆಯಲ್ಲಿ ವಿಶೇಷವಾದ ಸ್ಥಳವನ್ನು ನೀಡಲಾಗುತ್ತದೆ. ಮಾತ್ರವಲ್ಲದೆ ದೈವಗಳು ಆಶೀರ್ವದಿಸಿದ ಮಲ್ಲಿಗೆ ಹೂವುಗಳನ್ನು ಕೂಡ ಜಮಾಯತ್‍ನವರಿಗೆ ನೀಡಲಾಗುತ್ತದೆ.ಈ ಪವಿತ್ರವಾದ ಮಾಡ ಕ್ಷೇತ್ರದಲ್ಲಿ ನಡೆಯುವ ಜಾತ್ರೋತ್ಸವಕ್ಕೆ ಭೇದ ಭಾವವಿಲ್ಲದೆ ಹಿಂದೂ ಮುಸಲ್ಮಾನರು ಭಾಗವಹಿಸುವುದು ವಿಶೇಷತೆಯಾಗಿದೆ. ಜಮಾಯತ್ ಭೇಟಿಗೆ ಉದ್ಯಾವರ ಅರಸು ದೈವಗಳ ಕ್ಷೇತ್ರದ ಮುಖ್ಯಸ್ಥರಾದ ದುಗ್ಗ ಭಂಡಾರಿ, ತಿಮ್ಮ ಭಂಡಾರಿ, ಮುಂಡ ಶೆಟ್ಟಿ, ನಾರಾಯಣ ಗುರಿಕ್ಕಾರ್, ಪದ್ಮ ಗುರಿಕ್ಕಾರ್, ರಘು ಶೆಟ್ಟಿ, ಕಿರಣ್ ಮಾಡ, ರವಿ, ದಯಾಕರ ಮಾಡ ಹಾಗೂ ಎರಡು ವರ್ಣ ಹಾಗೂ ನಾಲ್ಕು ಗ್ರಾಮದವರು ಸೇರಿದಂತೆ ಹಲವರು ಜಮಾಯತ್ ಭೇಟಿಯಲ್ಲಿ ಉಪಸ್ಥಿತರಿದ್ದರು.