HEALTH TIPS

ಬಂಧಿತರ ಜೈವಿಕ ಮಾದರಿ ಸಂಗ್ರಹಕ್ಕೆ ಮಸೂದೆ: ಅಮಿತ್ ಶಾ ಸಮರ್ಥನೆ

          ನವದೆಹಲಿ: ಅಪರಾಧ ಕೃತ್ಯಗಳಲ್ಲಿ ಬಂಧಿತರು, ಅಪರಾಧಿಗಳ ದೈಹಿಕ, ಜೈವಿಕ ಮಾದರಿ ಸಂಗ್ರಹಿಸಲು ಪೊಲೀಸರಿಗೆ ಶಾಸನಬದ್ಧ ಅಧಿಕಾರ ನೀಡುವ, 'ಅಪರಾಧ ಪ್ರಕ್ರಿಯೆ (ಗುರುತಿಸುವಿಕೆ) ಮಸೂದೆ'ಯನ್ನು ಸರ್ಕಾರ ಸಮರ್ಥಿಸಿಕೊಂಡಿದೆ.

         ಮಸೂದೆಯನ್ನು ಲೋಕಸಭೆಯು ಸೋಮವಾರ ಧ್ವನಿಮತದಿಂದ ಅಂಗೀಕರಿಸಿತು.

ಮಸೂದೆ ಮೇಲೆ ಚರ್ಚೆ ಆರಂಭಿಸಿದ ಗೃಹ ಸಚಿವ ಅಮಿತ್ ಶಾ, 'ಈ ಮಸೂದೆಯಲ್ಲದೇ ಸರ್ಕಾರ 'ಕಾರಾಗೃಹಗಳ ಮಾದರಿ ಕೈಪಿಡಿ'ಯನ್ನೂ ಸಿದ್ಧಪಡಿಸುತ್ತಿದೆ' ಎಂದರು.

              'ಸದನದಲ್ಲಿ ಈಗ ಮಂಡಿಸಿರುವ ಮಸೂದೆಯನ್ನು ಪ್ರತಿಪಕ್ಷಗಳು ಸೀಮಿತ ಚೌಕಟ್ಟಿನಿಂದ ನೋಡಬಾರದು. ಬಳಿಕ ಒದಗಿಸಲಿರುವ 'ಕಾರಾಗೃಹ ಮಾದರಿ ಕೈಪಿಡಿ'ಯನ್ನೂ ಗಮನದಲ್ಲಿಟ್ಟುಕೊಂಡು ಗಮನಿಸಬೇಕು' ಎಂದು ಮನವಿ ಮಾಡಿದರು.

            'ಮಸೂದೆಯ ಕರಡು ಸಿದ್ಧಪಡಿಸುವಾಗ ಮಾನವ ಮತ್ತು ವೈಯಕ್ತಿಕ ಹಕ್ಕುಗಳ ರಕ್ಷಣೆಗೆ ಅಗತ್ಯ ಕಾಳಜಿ ವಹಿಸಲಾಗಿದೆ. ದೇಶದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಆಂತರಿಕ ಭದ್ರತೆಯನ್ನು ಬಲಪಡಿಸುವುದೇ ಇದರ ಗುರಿ' ಎಂದು ಪ್ರತಿಪಾದಿಸಿದರು.

          'ಮಸೂದೆಗೆ ಸಂಬಂಧಿಸಿದ ಹಲವು ಪ್ರಶ್ನೆಗಳಿಗೆ ಈ ಕೈಪಿಡಿ ಉತ್ತರ ನೀಡಲಿದೆ. ಕೈದಿಗಳ ಪುನರುಜ್ಜೀವನ, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವುದು, ಜೈಲು ಅಧಿಕಾರಿಗಳ ಅಧಿಕಾರ ಸೀಮಿತಗೊಳಿಸುವುದು, ಶಿಸ್ತು ನಿರ್ವಹಣೆ, ಕಾರಾಗೃಹಗಳಲ್ಲಿ ಭದ್ರತೆ, ಮಹಿಳಾ ಕೈದಿಗಳಿಗೆ ಪ್ರತ್ಯೇಕ ಕಾರಾಗೃಹ ಮತ್ತು ಬಯಲು ಕಾರಾಗೃಹ -ಹೀಗೆ ವಿವಿಧ ಅಂಶಗಳಿವೆ' ಎಂದು ತಿಳಿಸಿದರು.

             'ಪ್ರಸ್ತುತ ಸಂದರ್ಭ, ವಿಜ್ಞಾನ, ನ್ಯಾಯಾಲಯಗಳಲ್ಲಿ ಅಪರಾಧ ಸಾಬೀತುಪಡಿಸುವಿಕೆ, ಕಾನೂನು ಜಾರಿ ಸಂಸ್ಥೆಗಳನ್ನು ಬಲಪಡಿಸುವುದು ಸೇರಿದಂತೆ ವಿವಿಧ ಆಯಾಮಗಳಿಂದ ಗಮನಿಸಿದಾಗ ಹಾಲಿ ಇರುವ 'ಕೈದಿಗಳ ಗುರುತುಪತ್ತೆ ಕಾಯ್ದೆ 1920' ಅಪ್ರಸ್ತುತವಾಗಿದೆ. ಈಗಿನ ಸವಾಲುಗಳನ್ನು ಸೂಕ್ತವಾಗಿ ಎದುರಿಸುವ ಜೊತೆಗೆ ವ್ಯವಸ್ಥೆ ಬಲಪಡಿಸಲು ಈ ಮಸೂದೆ ಪೂರಕವಾಗಿದೆ. 1980ರಲ್ಲಿಯೇ ಆಗಿನ ಕಾನೂನು ಆಯೋಗವು ಕಾಯ್ದೆಯ ಪುನರ್‌ ರಚಿಸುವ ಅಗತ್ಯವಿದೆ ಎಂದು ಹೇಳಿತ್ತು' ಎಂದರು.

ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಈ ಕುರಿತು ರಾಜ್ಯಗಳ ಜೊತೆಗೂ ಚರ್ಚಿಸಿದ್ದು,            ಅಭಿಪ್ರಾಯಗಳನ್ನು ಪಡೆಯಲಾಗಿದೆ. ಮಾನವ ಮತ್ತು ವೈಯಕ್ತಿಕ ಹಕ್ಕು ಕುರಿತು ಸದಸ್ಯರು ಈಗಾಗಲೇ ವ್ಯಕ್ತಪಡಿಸಿರುವ ಆತಂಕಗಳು ಸಕಾಲಿಕವಾಗಿವೆ. ಅವರ ಸಲಹೆಗಳನ್ನು ಒಳಗೊಂಡು ಮಸೂದೆಯನ್ನು ಅಂತಿಮಗೊಳಿಸಲಾಗಿದೆ ಎಂದು ಶಾ ಸಮರ್ಥಿಸಿಕೊಂಡರು.

              ನಾವು ಈಗ ಕಾಯ್ದೆಯಲ್ಲಿ ಅಗತ್ಯ ಬದಲಾವಣೆ ತರದಿದ್ದಲ್ಲಿ, ಅಪರಾಧ ಸಾಬೀತುಪಡಿಸಲು ನ್ಯಾಯಾಲಯಗಳಿಗೆ ಪೂರಕ ಸಾಕ್ಷ್ಯ ಒದಗಿಸುವಲ್ಲಿಯೂ ಹಿಂದುಳಿಯುತ್ತೇವೆ. ತಪ್ಪಿತಸ್ಥರನ್ನು ಶಿಕ್ಷೆಗೊಳಪಡಿಸುವ ಪ್ರಮಾಣವು ಹೆಚ್ಚುವುದಿಲ್ಲ ಎಂದು ಹೇಳಿದರು.

          ಕೇಂದ್ರ ಸರ್ಕಾರ ಕಳೆದ ಸೋಮವಾರವೇ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿತ್ತು. ಆಗ, ವಿರೋಧಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದು, 'ಕಾನೂನು ಬಾಹಿರ' ಮತ್ತು 'ಅಸಾಂವಿಧಾನಿಕ ಕ್ರಮ' ಎಂದು ಪ್ರತಿಪಕ್ಷಗಳು ಟೀಕಿಸಿದ್ದವು.

                                      ಮಸೂದೆಯ ಉದ್ದೇಶ, ಪ್ರತಿಪಕ್ಷಗಳ ಆತಂಕ

* 102 ವರ್ಷ ಹಳೆಯ ಕಾಯ್ದೆ ವ್ಯಾಪ್ತಿ ವಿಸ್ತರಿಸುವ ಉದ್ದೇಶ. ಅಪರಾಧ ಪ್ರಕರಣಗಳಲ್ಲಿನ ಆರೋಪಿಗಳು, ಕೈದಿಗಳಿಗೆ ಸಂಬಂಧಿಸಿ ಜೈವಿಕ, ದೈಹಿಕ ಮಾದರಿ ಪಡೆಯಲು ಪೊಲೀಸರಿಗೆ ಕಾನೂನು ಅಧಿಕಾರ ನೀಡುವ ಉದ್ದೇಶ.

* ಇದುವರೆಗೂ ಭಾವಚಿತ್ರ, ಬೆರಳಚ್ಚು, ಪಾದದಚ್ಚು ಪಡೆಯಲಷ್ಟೇ ಅವಕಾಶವಿತ್ತು. ಈಗಿನ ಮಸೂದೆ ಪ್ರಕಾರ ಹಸ್ತರೇಖೆ, ಕಣ್ಣು, ಅಕ್ಷಿಪಟಲ, ದೈಹಿಕ, ಜೈವಿಕ ಮಾದರಿ ಸಂಗ್ರಹ, ಅವುಗಳ ವಿಶ್ಲೇಷಣೆ, ಸಹಿ, ಕೈಬರಹ ಸೇರಿ ಅವರ ವರ್ತನೆಯನ್ನು ಸಾಬೀತು ಪಡಿಸುವ ವಿವಿಧ ಅಂಶಗಳನ್ನು ಸಂಗ್ರಹಿಸಲು ಅವಕಾಶವಿದೆ.

* ತೃಣಮೂಲ ಕಾಂಗ್ರೆಸ್‌ ಪಕ್ಷದ ಸೌಗತಾ ರಾಯ್, ಬಿಜೆಡಿಯ ಭರ್‌ತ್ರುಹರಿ ಮಹ್ತಾಬ್‌, ಆರ್‌ಎಸ್‌ಪಿಯ ಎನ್‌.ಕೆ.ಪ್ರೇಮಚಂದ್ರನ್‌ ಅವರು ಮಸೂದೆಗೆ ಒಟ್ಟು 24 ಬದಲಾವಣೆಗಳನ್ನು ಸೂಚಿಸಿದ್ದಾರೆ.

* ಜೈವಿಕ ಮತ್ತು ದೈಹಿಕ ಮಾದರಿ ಪಡೆಯಲು ಮುಖ್ಯವಾಗಿ ಆಕ್ಷೇಪ ವ್ಯಕ್ತವಾಗಿದೆ. ಖಾಸಗೀತನ ರಕ್ಷಣೆ ಕಾಯ್ದೆಯ ಅನುಪಸ್ಥಿತಿಯಲ್ಲಿ ಈ ಬಗ್ಗೆ ಸ್ಪಷ್ಟತೆ ಇಲ್ಲ. ಹೀಗಾಗಿ, ಈ ಅಂಶವನ್ನು ಕೈಬಿಡಬೇಕು ಎಂದು ಕೋರಲಾಗಿದೆ.

* ಮಾದರಿ ಸಂಗ್ರಹಿಸುವ ಅಧಿಕಾರವನ್ನು ಹೆಡ್‌ ಕಾನ್‌ಸ್ಟೆಬಲ್‌, ಹೆಡ್‌ ವಾರ್ಡನ್‌ಗೆ ನೀಡಿರುವುದಕ್ಕೂ ಆಕ್ಷೇಪ ವ್ಯಕ್ತವಾಗಿದೆ. ಡಿವೈಎಸ್‌ಪಿ ಅಥವಾ ಜೈಲು ಸೂಪರಿಂಟೆಂಡೆಂಟ್‌ಗೆ ಈ ಅಧಿಕಾರ ಇರಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸಿವೆ.

* ಹೊಸ ಮಸೂದೆ ಪ್ರಕಾರ, ಅಪರಾಧಿಗಳು ಮತ್ತು ಆರೋಪಿಗಳ ಮಾದರಿ ಸಂಗ್ರಹಿಸುವುದನ್ನು ಗಂಭೀರ ಸ್ವರೂಪದ ಅಪರಾಧಗಳಿಗಷ್ಟೇ ಅನ್ವಯಿಸಬೇಕು ಎಂಬುದು ಪ್ರೇಮಚಂದ್ರನ್‌ ಅವರ ಸಲಹೆ.

ಸಂಗ್ರಹಿಸಿದ ಮಾಹಿತಿಯನ್ನು ರಾಷ್ಟ್ರೀಯ ಅಪರಾಧ ದಾಖಲೆ ಮಂಡಳಿ (ಎನ್‌ಸಿಆರ್‌ಬಿ) 75 ವರ್ಷ ಮೀರಿ ಸಂರಕ್ಷಿಸಬಾರದು ಮತ್ತು ಇತರೆ ಸಂಸ್ಥೆಗಳ ಜೊತೆಗೆ ಹಂಚಿಕೊಳ್ಳಬಾರದು ಎಂದು ವಿರೋಧಪಕ್ಷಗಳು ಸಲಹೆ ಮಾಡಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries