ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದಿನಿಂದ ಎರಡು ದಿನಗಳ ಕಾಲ ಗುಜರಾತ್ ಪ್ರವಾಸಕ್ಕೆ ತೆರಳಿದ್ದಾರೆ. ಹೀಗಿರುವಾಗಲೇ, ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಗುಜರಾತ್‌ನ ಸರ್ಕಾರಿ ಶಾಲೆಗಳ ದಯನೀಯ ಸ್ಥಿತಿಯ ಚಿತ್ರಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದಿನಿಂದ ಎರಡು ದಿನಗಳ ಕಾಲ ಗುಜರಾತ್ ಪ್ರವಾಸಕ್ಕೆ ತೆರಳಿದ್ದಾರೆ. ಹೀಗಿರುವಾಗಲೇ, ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಗುಜರಾತ್‌ನ ಸರ್ಕಾರಿ ಶಾಲೆಗಳ ದಯನೀಯ ಸ್ಥಿತಿಯ ಚಿತ್ರಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಏಪ್ರಿಲ್ 18-20 ರವರೆಗೆ ಪ್ರಧಾನಿ ಮೋದಿ ಅವರ ಗುಜರಾತ್ ಪ್ರವಾಸ ನಿಗದಿಯಾಗಿದೆ. ಈ ವೇಳೆ ಅವರು ಗಾಂಧಿನಗರದಲ್ಲಿರುವ ಶಾಲೆಗಳ ನಿಯಂತ್ರಣಾ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ.
'ಎರಡು ದಿನಗಳ ಭೇಟಿಗಾಗಿ ನಾಳೆ, ಏಪ್ರಿಲ್ 18 ರಿಂದ ಗುಜರಾತ್‌ಗೆ ತೆರಳುತ್ತಿದ್ದೇನೆ. ಈ ವೇಳೆಯಲ್ಲೇ ನಾನು ಗಾಂಧಿನಗರ, ಬನಸ್ಕಾಂತ, ಜಾಮ್‌ನಗರ ಮತ್ತು ದಾಹೋದ್‌ನಲ್ಲಿ ವಿವಿಧ ರಂಗದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೇನೆ. ಜನರ 'ಸುಗಮ ಜೀವನ'ಕ್ಕೆ ಈ ಕಾರ್ಯಕ್ರಮಗಳು ನೆರವಾಗಲಿವೆ' ಎಂದು ಪ್ರಧಾನಿ ಮೋದಿ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.
'ನಾಳೆ ಗುಜರಾತ್ ತಲುಪಿದ ನಂತರ ವಿದ್ಯಾ ಸಮೀಕ್ಷಾ ಕೇಂದ್ರಕ್ಕೆ ಭೇಟಿ ನೀಡುತ್ತೇನೆ. ಈ ಆಧುನಿಕ ಕೇಂದ್ರವು ಫಲಿತಾಂಶ ಸುಧಾರಣೆಗಾಗಿ ದತ್ತಾಂಶ ಮತ್ತು ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರೊಂದಿಗೆ ನಾನು ಸಂವಾದ ನಡೆಸುತ್ತೇನೆ' ಎಂದು ಅವರು ತಿಳಿಸಿದ್ದರು.
ಪ್ರಧಾನಿಯವರ ಈ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ದಯನೀಯ ಸ್ಥಿತಿಯಲ್ಲಿರುವ ಸರ್ಕಾರಿ ಶಾಲೆಯೊಂದರ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. 'ಆತ್ಮೀಯ ಪ್ರಧಾನಿಗಳೇ, ವಿದ್ಯಾ ಸಮೀಕ್ಷಾ ಕೇಂದ್ರದಿಂದ ನೀವು ಈ ಶಾಲೆಗಳ ಚಿತ್ರವನ್ನು ನೋಡಲು ಸಾಧ್ಯವಾಗದೇ ಇರಬಹುದು. ಈ ಶಾಲೆಗಳಲ್ಲಿ ಕುಳಿತುಕೊಳ್ಳಲು ಮೇಜು, ಕುರ್ಚಿಗಳಿಲ್ಲ. ಕಸದ ರಾಶಿಯಂತಿರುವ ಶಾಲೆಗಳಲ್ಲಿ ಜೇಡರ ಬಲೆಗಳಿವೆ, ಶೌಚಾಲಯಗಳು ಹಾಳಾಗಿವೆ. ಇಂಥ ಸ್ಥಿತಿಯಲ್ಲಿರುವ ಶಾಲೆಗಳನ್ನು ನಾನು ಗುಜರಾತ್‌ನ ಶಿಕ್ಷಣ ಸಚಿವರ ಕ್ಷೇತ್ರದಲ್ಲೇ ನೋಡಿದ್ದೇನೆ' ಎಂದು ಸಿಸೋಡಿಯಾ ಹಿಂದಿಯಲ್ಲಿ ಹೇಳಿದ್ದಾರೆ.
ಈ ಮೂಲಕ ಗುಜರಾತ್‌ನ ಶಾಲೆಗಳ ದುಸ್ಥಿತಿಯನ್ನು ರಾಷ್ಟ್ರಕ್ಕೆ ತಿಳಿಸುವ ಪ್ರಯತ್ನವನ್ನು ಎಎಪಿ ನಾಯಕ ಸಿಸೋಡಿಯಾ ಮಾಡಿದ್ದಾರೆ.