ಕಾಸರಗೋಡು: ತಲಪ್ಪಾಡಿಯಿಂದ ಚೆರ್ಕಳ ವರೆಗಿನ ಷಟ್ಪಥ ನಿರ್ಮಾಣ ಕಾಮಗಾರಿ ಬಿರುಸಿನಿಂದ ಸಾಗುತ್ತಿದೆ. ನಾಲ್ಕು ಬೃಹತ್ ಹಾಗೂ ನಾಲ್ಕು ಸಣ್ಣ ಸೇತುವೆಗಳು ಹಾಗೂ ಮೇಲ್ಸೇತುವೆ ಒಳಗೊಂಡ 40ಕಿ.ಮೀ ರಸ್ತೆ ಕಾಮಗಾರಿ ಮೊದಲ ಹಂತದಲ್ಲಿ ನಡೆಯಲಿದೆ. ಊರಾಳುಂಗಲ್ ಸೊಸೈಟಿ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿದ್ದು, ಉಪ್ಪಳ, ಶಿರಿಯ, ಕುಂಬಳೆ ಹಾಗೂ ಮೊಗ್ರಾಲ್ ಹೊಳೆಗಳಿಗೆ ಬೃಹತ್ ಸೇತುವೆಗಳು ನಿರ್ಮಾಣಗೊಳ್ಳಲಿದೆ. ಕರಂದಕ್ಕಾಡಿನಿಂದ ನುಳ್ಳಿಪ್ಪಾಡಿ ವರೆಗಿನ ಮೇಲ್ಸೇತುವೆ ಕಾಮಗಾರಿಯೂ ಬಿರುಸಿನಿಂದ ಸಾಗುತ್ತಿದೆ.
ಈಗಾಗಲೇ ಬೇಸಿಗೆ ಮಳೆಗೆ ಬಹುತೇಕ ಕಡೆ ರಸ್ತೆಯಿಂದ ಹರಿಯುವ ನೀರು ಮನೆಹಿತ್ತಿಲುಗಳಿಗೆ ಹರಿಯುತ್ತಿದ್ದು, ಜನರು ಸಮಸ್ಯೆ ಎದುರಿಸುವಂತಾಗಿದೆ. ಹೆದ್ದಾರಿ ನಿರ್ಮಾಣಗೊಳ್ಳಳಿರುವ ರಸ್ತೆ ಅಂಚಿನ ಮರಗಳನ್ನು ತೆರವುಗೊಳಿಸಲಾಗಿದ್ದು, ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಕಾರ್ಯವೂ ಬಿರುಸಿನಿಂದ ನಡೆಯುತ್ತಿದೆ. ಮಳೆಗಾಲಕ್ಕೂ ಮೊದಲು ಮಣ್ಣುಹಾಸಿ, ಕಾಂಕ್ರೀಟ್ ಮಿಶ್ರಣದೊಂದಿಗೆ ಮೊದಲ ಹಂತದ ಡಾಂಬರೀಕರಣ ಪೂರ್ತಿಗೊಳಿಸಬೇಕಾಗಿದೆ. ಜತೆಗೆ ಚರಂಡಿ ನಿರ್ಮಾಣ ಕಾಮಗಾರಿಯೂ ನಡೆಯಬೇಕಾಗಿದೆ. ಮಳೆಗಾಲದಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿಯುವ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಚರಂಡಿ ನಿರ್ಮಾಣಕ್ಕೂ ಗುತ್ತಿಗೆದಾರರು ಅಗತ್ಯ ಕ್ರಮ ಕೈಗೊಳ್ಳುವಂತೆ ನಾಗರಿಕರು ಆಗ್ರಹಿಸಿದ್ದಾರೆ.