ಪ್ರಧಾನಿ ವಿರುದ್ಧದ ಅವಿಶ್ವಾಸ ನಿರ್ಣಯ ಮಂಡನೆ ಸಂವಿಧಾನದ ವಿಧಿ 5ಕ್ಕೆ ವಿರುದ್ಧವಾಗಿದೆ ಎಂದು ಹೇಳಿ ಪಾಕಿಸ್ತಾನ ನ್ಯಾಷನಲ್ ಅಸೆಂಬ್ಲಿಯ ಉಪ ಸ್ಪೀಕರ್ ಖಾಸಿಂ ಖಾನ್ ಸೂರಿ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು. ಇದರಿಂದ ಪ್ರಧಾನಿಯಾಗಿ ಇಮ್ರಾನ್ ಖಾನ್ ಮುಂದುವರೆಯಲಿದ್ದಾರೆ.
ಕೂಡಲೇ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಇಮ್ರಾನ್ ಖಾನ್, ಅಸೆಂಬ್ಲಿ ವಿಸರ್ಜನೆಗೆ ರಾಷ್ಟ್ರಾಧ್ಯಕ್ಷರಿಗೆ ಪತ್ರ ಬರೆದಿರುವುದಾಗಿ ತಿಳಿಸಿದರು. ಪ್ರಜಾಸತಾತ್ಮಕ ಹಾದಿಯಲ್ಲಿ ಚುನಾವಣೆ ನಡೆಯಲಿ, ಚುನಾವಣೆಗೆ ಸಜ್ಜಾಗುವಂತೆ ಪಾಕಿಸ್ತಾನದ ಜನರಿಗೆ ಕರೆ ನೀಡುವುದಾಗಿ ಹೇಳಿದರು.
ಸ್ಪೀಕರ್ ನಿರ್ಧಾರ ವಿಚಾರದಲ್ಲಿ ಪ್ರತಿಯೊಬ್ಬ ಪಾಕಿಸ್ತಾನಿ ಪ್ರಜೆಯನ್ನು ಅಭಿನಂದಿಸುತ್ತೇನೆ. ವಿದೇಶಿ ಪಿತೂರಿಯಿಂದ ನನ್ನ ವಿರೋಧ ಅವಿಶ್ವಾಸ ನಿರ್ಣಯ ಮಂಡಿಸಲಾಗಿದೆ. ಯಾರು ಆಡಳಿತ ನಡೆಸಬೇಕು ಎಂಬುದನ್ನು ಪಾಕಿಸ್ತಾನದ ಜನರು ನಿರ್ಧರಿಸಲಿದ್ದಾರೆ ಎಂದು ಇಮ್ರಾನ್ ಖಾನ್ ಹೇಳಿದರು.
ಇದಕ್ಕೂ ಮುನ್ನ ಪಾಕಿಸ್ತಾನ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ನಡೆದ ಅವಿಶ್ವಾಸ ನಿರ್ಣಯ ಮೇಲಿನ ಮತದಾನ ವೇಳೆಯಲ್ಲಿ ಇಮ್ರಾನ್ ಖಾನ್ ಅಸೆಂಬ್ಲಿಯಲ್ಲಿ ಇರಲಿಲ್ಲ.