ಅಹ್ಮದಾಬಾದ್: ಭಾರತೀಯ ಬ್ಯಾಂಕ್ ಗಳಿಗೆ ಬಹುಕೋಟಿ ವಂಚನೆ ಮಾಡಿ ಬ್ರಿಟನ್ ಗೆ ಪಲಾಯನ ಗೈದಿರುವ ಉದ್ಯಮಿಗಳಾದ ನೀರವ್ ಮೋದಿ ಮತ್ತು ವಿಜಯ್ ಮಲ್ಯಗೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಶಾಕ್ ನೀಡಿದ್ದು, ಆರ್ಥಿಕ ಪಲಾಯನಕಾರರು, ಉಗ್ರಗಾಮಿಗಳನ್ನು ಬ್ರಿಟನ್‌ನಲ್ಲಿ ಸ್ವಾಗತಿಸುವುದಿಲ್ಲ ಎಂದು ಹೇಳಿದ್ದಾರೆ.
ಪ್ರಸ್ತುತ ಭಾರತ ಪ್ರವಾಸದಲ್ಲಿರುವ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು, ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ 'ಭಾರತ ಮತ್ತು ಬ್ರಿಟನ್ ದ್ವಿಪಕ್ಷೀಯ ಚರ್ಚೆಯಲ್ಲಿ ಆರ್ಥಿಕ ಅಪರಾಧಿಗಳು ಮತ್ತು ಖಲಿಸ್ತಾನಿ ಗುಂಪುಗಳ ವಿಷಯಕ್ಕೆ ಹೆಚ್ಚಿನ ಆದ್ಯತೆ ನೀಡಿರುವುದಾಗಿ ವಿವರಿಸಿದರು.
ನೀರವ್ ಮೋದಿ , ವಿಜಯ್ ಮಲ್ಯ ಮತ್ತು ಖಲಿಸ್ತಾನಿ ಉಗ್ರಗಾಮಿಗಳ ಬಗ್ಗೆ ಕೇಳಿದ ಪ್ರಶ್ನೆಗೆ, ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು, 'ಇತರೆ ದೇಶಗಳು ಮತ್ತು ಭಾರತಕ್ಕೆ ಬೆದರಿಕೆ ಹಾಕುವ ಉಗ್ರಗಾಮಿ ಗುಂಪುಗಳನ್ನು ಬ್ರಿಟನ್ (United Kingdom) ಸಹಿಸುವುದಿಲ್ಲ. ನಾವು ಉಗ್ರಗಾಮಿ ವಿರೋಧಿ ಕಾರ್ಯಪಡೆಯನ್ನು ಸ್ಥಾಪಿಸಿದ್ದೇವೆ. ಹಸ್ತಾಂತರ ಪ್ರಕರಣಗಳ ವಿಷಯದಲ್ಲಿ, ಕಾನೂನು ತಾಂತ್ರಿಕತೆಗಳು ಕಷ್ಟಕರವಾಗಿಸಿದೆ. ನಮ್ಮ ದೃಷ್ಟಿಕೋನದಿಂದ, ಅವರು ಹಿಂತಿರುಗಬೇಕೆಂದು ನಾವು ಬಯಸುತ್ತೇವೆ. ನಮ್ಮ ಕಾನೂನು ವ್ಯವಸ್ಥೆಯನ್ನು ಬಳಸಿಕೊಂಡು ಕಾನೂನಿನಿಂದ ತಪ್ಪಿಸಿಕೊಳ್ಳಲು ಬಯಸುವ ಜನರನ್ನು ನಾವು ಎಂದಿಗೂ ಸ್ವಾಗತಿಸುವುದಿಲ್ಲ ಎಂದು ಜಾನ್ಸನ್ ಹೇಳಿದ್ದಾರೆ.
ತಮ್ಮ ದ್ವಿಪಕ್ಷೀಯ ಭೇಟಿಯ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಬೋರಿಸ್ ಜಾನ್ಸನ್ ಅವರು ಖಲಿಸ್ತಾನಿ ಗುಂಪುಗಳು ಮತ್ತು ಭಾರತದ ವಾಟೆಂಡ್ ಆರ್ಥಿಕ ಅಪರಾಧಿಗಳ ಬಗ್ಗೆ ಚರ್ಚಿಸಿದರು ಎನ್ನಲಾಗಿದೆ. ಈ ವಿಷಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಉಭಯ ದೇಶಗಳು ಹೇಳಿವೆ.