ನವದೆಹಲಿ: ಯೂಕ್ರೇನ್-ರಷ್ಯಾ ನಡುವಿನ ಬಿಕ್ಕಟ್ಟು ಪರಿಹಾರಕ್ಕೆ ಮಾತುಕತೆ ಒಂದೇ ಸರಿಯಾದ ಮಾರ್ಗವನ್ನು ಒದಗಿಸಬಲ್ಲದು ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಪ್ರತಿಪಾದಿಸಿದರು. ಈ ಬಿಕ್ಕಟ್ಟಿನ ಪರಿಹಾರಕ್ಕೆ ಸಂಬಂಧಿಸಿ ಭಾರತ ಮತ್ತು ಅಮೆರಿಕ ನಡುವೆ ಹಲವು ಸುತ್ತುಗಳ ಆಪ್ತ ಸಮಾಲೋಚನೆ ನಡೆದಿದೆ.
ಭಾರತದ ನಿಲುವು ಸ್ಪಷ್ಟ: ಯೂಕ್ರೇನ್ ರಷ್ಯಾ ಬಿಕ್ಕಟ್ಟಿನ ವಿಚಾರದಲ್ಲಿ ಭಾರತದ ನಿಲುವು ಸ್ಪಷ್ಟವಾಗಿದೆ. ಬುಚಾದಲ್ಲಿ ನಾಗರಿಕರ ಹತ್ಯೆ ಖಂಡನೀಯ. ಈ ಕುರಿತು ಸ್ವತಂತ್ರ ತನಿಖೆ ಆಗಬೇಕು ಎಂದು ಭಾರತ ಆಗ್ರಹಿಸಿದೆ. ಭಾರತದ ಪೌರರ ರಕ್ಷಣೆಗಾಗಿ ಉಭಯ ರಾಷ್ಟ್ರಗಳ ಮುಖ್ಯಸ್ಥರ ಜತೆಗೆ ಸಂಪರ್ಕ ಹೊಂದಿದಾಗ, ಶಾಂತಿಗಾಗಿ ಸ್ವತಃ ಮನವಿ ಮಾಡಿದ್ದೆ. ಮುಖಾಮುಖಿ ಮಾತುಕತೆ ನಡೆಸಿ ದ್ವಿಪಕ್ಷೀಯವಾಗಿಯೇ ಸಮಸ್ಯೆ ಬಗೆಹರಿಸಲು ಕೋರಿದ್ದೆ. ಯೂಕ್ರೇನ್ ನಾಗರಿಕರಿಗೆ ಮಾನವೀಯ ನೆರವನ್ನೂ ತಲುಪಿಸಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಜೋ ಬೈಡೆನ್ಗೆ ವಿವರಿಸಿದರು.
ಸಹಜ ಪಾಲುದಾರ ರಾಷ್ಟ್ರಗಳು: ಜಗತ್ತಿನ ಎರಡು ಅತಿದೊಡ್ಡ ಮತ್ತು ಪುರಾತನ ಪ್ರಜಾಪ್ರಭುತ್ವ ರಾಷ್ಟ್ರಗಳು ಭಾರತ ಮತ್ತು ಅಮೆರಿಕ. ನಮ್ಮದು ಸಹಜ ಪಾಲುದಾರ ರಾಷ್ಟ್ರಗಳು.ಪ್ರಸ್ತುತ ಯೂಕ್ರೇನ್ - ರಷ್ಯಾ ಬಿಕ್ಕಟ್ಟು ಮಾತುಕತೆ ಮೂಲಕ ಬಗೆಹರಿಸಬಹುದಾಗಿರುವಂಥದ್ದು. ಭಾರತ ತನ್ನ 20,000 ಪೌರರನ್ನು ಸ್ವದೇಶಕ್ಕೆ ವಾಪಸ್ ಕರೆತರಲು ಉಭಯ ರಾಷ್ಟ್ರಗಳ ಮುಖ್ಯಸ್ಥರ ಜತೆಗೆ ನೇರ ಮಾತುಕತೆ ಮತ್ತು ಸಂಪರ್ಕ ಹೊಂದಿದ್ದು ಸಹಕಾರಿಯಾಗಿತ್ತು. ಸಮರ ಪೀಡಿತ ರಾಷ್ಟ್ರಕ್ಕೆ ನೆರವನ್ನು ಕೂಡ ಭಾರತ ರವಾನಿಸಿದೆ ಎಂದು ಮೋದಿ ಹೇಳಿದರು.
ಭಾರತಕ್ಕೆ ಬೈಡೆನ್ ಪ್ರಶಂಸೆ: ಭಾರತ ಮತ್ತು ಅಮೆರಿಕ ನಡುವಿನ ಸ್ನೇಹವನ್ನು ಬಿಂಬಿಸಿದ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಯೂಕ್ರೇನ್ ಜನರಿಗೆ ಮಾನವೀಯ ನೆರವು ಒದಗಿಸಿದ ಭಾರತದ ಕ್ರಮವನ್ನು ಪ್ರಶಂಸಿಸಿದರು. ಭಾರತ ಮತ್ತು ಅಮೆರಿಕ ನಡುವೆ ಮಹತ್ವದ ರಕ್ಷಣಾ ಪಾಲುದಾರಿಕೆ ಬಲಿಷ್ಠವಾಗಿ ಬೆಳೆಯುತ್ತಿದೆ. ನಮ್ಮ ಜನರು ಮತ್ತು ಹಂಚಿಕೊಂಡ ಮೌಲ್ಯಗಳೇ ನಮ್ಮ ಬಹುತೇಕ ಪಾಲುದಾರಿಕೆಗಳಿಗೆ ಬುನಾದಿ. ನಮ್ಮ ಸ್ನೇಹ ಮತ್ತು ನಮ್ಮ ಹಂಚಿಕೊಂಢ ಮೌಲ್ಯಗಳು ಸಂಬಂಧವನ್ನು ಬಲಿಷ್ಠಗೊಳಿಸಿವೆ. ಯೂಕ್ರೇನ್ನಿಯನ್ನರಿಗೆ ಭಾರತದ ಮಾನವೀಯ ನೆರವನ್ನು ನಾನು ಸ್ವಾಗತಿಸುತ್ತೇನೆ. 2+2 ಶೃಂಗಕ್ಕೆ ಪೂರ್ವಭಾವಿಯಾಗಿ ನಿಮ್ಮ ಜತೆಗೆ ವರ್ಚುವಲ್ ಆಗಿ ಮಾತನಾಡಲು ನಮಗೆ ಖುಷಿ ಆಗುತ್ತಿದೆ. ಕೋವಿಡ್ 19, ಆರೋಗ್ಯ ಸುರಕ್ಷತೆ, ಆರ್ಥಿಕ ಬಿಕ್ಕಟ್ಟು ಸರಿಪಡಿಸುವುದು ಸೇರಿ ಹಲವು ಸಮಾನ ಆಸಕ್ತಿಯ ವಿಚಾರಗಳನ್ನು ಸಚಿವರ ಮಟ್ಟದ ಸಭೆಯಲ್ಲಿ ರ್ಚಚಿಸಲಾಗುತ್ತದೆ ಎಂದು ಬೈಡೆನ್ ವಿವರಿಸಿದರು.
ವಾಷಿಂಗ್ಟನ್ನಲ್ಲಿ 2+2 ಶೃಂಗ: ಭಾರತ ಮತ್ತು ಅಮೆರಿಕ ನಡುವಿನ 2+2 ಶೃಂಗ ವಾಷಿಂಗ್ಟನ್ನಲ್ಲಿ ಆಯೋಜಿತವಾಗಿದೆ. ಇದಕ್ಕಾಗಿ ಭಾರತದ ರಕ್ಷಣಾ ಸಚಿವ ರಾಜನಾಥ ಸಿಂಗ್ ಮತ್ತು ವಿದೇಶಾಂಗ ಸಚಿವ ಎಸ್.ಜೈಶಂಕರ್ ವಾಷಿಂಗ್ಟನ್ ತಲುಪಿದ್ದಾರೆ. ಈ ಶೃಂಗ ಸಚಿವರ ಸ್ತರದ ಶೃಂಗವಾಗಿದ್ದು, ಇದಕ್ಕೆ ಪೂರ್ವಭಾವಿಯಾಗಿ ಪ್ರಧಾನಿ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ವರ್ಚುವಲ್ ಮಾತುಕತೆ ನಡೆಸಿದರು. 2+2 ಶೃಂಗದಲ್ಲಿ ಕೋವಿಡ್ 19 ಸಂಕಷ್ಟ ಮತ್ತು ಪರಿಹಾರ ಕಾರ್ಯದ ಪ್ರಗತಿ, ಹವಾಮಾನ ವೈಪರೀತ್ಯ ತಡೆ, ಜಾಗತಿಕ ಅರ್ಥವ್ಯವಸ್ಥೆ ಬಲಿಷ್ಠಗೊಳಿಸುವುದು, ಮುಕ್ತ, ಉಚಿತ ಮತ್ತು ನಿಯಮಾಧಾರಿತ ಅಂತಾರಾಷ್ಟ್ರೀಯ ಭದ್ರತೆ, ಪ್ರಜಾಪ್ರಭುತ್ವ, ಇಂಡೋ-ಪೆಸಿಫಿಕ್ ಪ್ರಾಂತ್ಯದ ಅಭಿವೃದ್ಧಿ ಮುಂತಾದ ವಿಚಾರಗಳು ಮಾತುಕತೆಯ ಅಜೆಂಡಾದಲ್ಲಿವೆ.