ಮಧೂರು: ಸಮಾಜದ ಶಾಂತಿ ಮತ್ತು ಒಗ್ಗಟ್ಟಿಗಾಗಿ ಎಡನೀರು ಶ್ರೀ ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಅವರ ನೇತೃತ್ವದಲ್ಲಿ ಭಕ್ತರ ನಡಿಗೆ ಭಗವಂತನೆಡೆಗೆ ಎಂಬ ಸಂದೇಶವನ್ನು ಸಾರುವ ಪಾದಯಾತ್ರೆ ಎ.13 ರಂದು ನಡೆಯಿತು.
ಎಡನೀರು ಶ್ರೀ ಮಠದಿಂದ ಬೆಳಗ್ಗೆ 6 ಗಂಟೆಗೆ ನೂರಾರು ಭಕ್ತರ ಉಪಸ್ಥಿತಿಯಲ್ಲಿ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಪಾದಯಾತ್ರೆ ನಡೆಯಿತು. ಮಧ್ಯಾಹ್ನ 11.45 ರ ಸುಮಾರಿಗೆ 18 ಕಿಲೋಮೀಟರ್ ದೂರದ ಯಾತ್ರೆ ಶ್ರೀ ಕ್ಷೇತ್ರ ಮಧೂರಿಗೆ ತಲುಪಿತು.
ಅಣಂಗೂರು ಶ್ರೀ ಶಾರದಾ ಭಜನಾ ಮಂದಿರ, ನುಳ್ಳಿಪ್ಪಾಡಿ ಶ್ರೀ ಅಯ್ಯಪ್ಪ ಕ್ಷೇತ್ರ, ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ, ಕರಂದಕ್ಕಾಡು ಶ್ರೀ ಹನುಮಾನ್ ಮಂದಿರ, ಸೂರ್ಲು ಗಣೇಶ ಭಜನಾ ಮಂದಿರ, ಶಾಸ್ತಾನಗರ ಶ್ರೀ ಅಯ್ಯಪ್ಪ ಭಜನಾ ಮಂದಿರ, ಉಳಿಯತ್ತಡ್ಕ ಶ್ರೀ ಶಕ್ತಿ ಭಜನಾ ಮಂದಿರ, ರಾಮದಾಸನಗರ, ಪಾರೆಕಟ್ಟೆ ಮೊದಲಾದೆಡೆ ಪಾದಯಾತ್ರೆಗೆ ಸ್ವಾಗತ ನೀಡಲಾಯಿತು.
ಬೆಳಗ್ಗೆ 6 ಗಂಟೆಗೆ ಶ್ರೀ ಮಠದಿಂದ ಪ್ರಾರಂಭಗೊಂಡ ಪಾದಯಾತ್ರೆ ವಿದ್ಯಾನಗರ, ಅಣಂಗೂರು, ನುಳ್ಳಿಪ್ಪಾಡಿ, ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಕಾಸರಗೋಡು, ಕರಂದಕ್ಕಾಡು, ಗಣೇಶ ಮಂದಿರ, ರಾಮದಾಸನಗರ, ಉಳಿಯತ್ತಡ್ಕ ದಾರಿಯಾಗಿ ಸುಮಾರು 18 ಕಿ.ಮೀ. ದೂರವನ್ನು ಕ್ರಮಿಸಿ ಶ್ರೀ ಮಧೂರು ಸನ್ನಿಧಿಗೆ ತಲುಪಿತು. ಈ ಮಧ್ಯೆ ಉಳಿಯತ್ತಡ್ಕದಲ್ಲಿ ಮಾಣಿಲ ಶ್ರೀ ಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಪಾದಯಾತ್ರೆಯಲ್ಲಿ ಸೇರಿಕೊಂಡರು.
ಪಾದಯಾತ್ರೆಯ ಸಂಕಲ್ಪದಂತೆ ಶ್ರೀ ಮಧೂರು ಕ್ಷೇತ್ರದಲ್ಲಿ 108 ತೆಂಗಿನಕಾಯಿ ವಿಶೇಷ ಗಣಹೋಮ ಜರಗಿತು. ಗಣಹೋಮದ ಬಳಿಕ ಎಡನೀರು ಶ್ರೀಗಳು ಆಶೀರ್ವಚನ ನೀಡಿದರು. ಇದೇ ಸಂದರ್ಭದಲ್ಲಿ ಎ.22 ರಂದು ನಡೆಯುವ ಮಂಡಲ ಭಜನಾ ಸಂಕೀರ್ತನೋತ್ಸವ ಸಮಾರೋಪ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ಮಾಣಿಲ ಶ್ರೀ ಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ತಂತ್ರಿವರ್ಯರಾದ ಬ್ರಹ್ಮಶ್ರೀ ಉಳಿಯ ವಿಷ್ಣು ಆಸ್ರ, ದೇವಸ್ಥಾನದ ಮುಖ್ಯ ಅರ್ಚಕ ಶ್ರೀಕೃಷ್ಣ ಉಪಾಧ್ಯಾಯ, ಮಧೂರು ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಯು.ಟಿ.ಆಳ್ವ, ಉಪಾಧ್ಯಕ್ಷ ಡಾ.ಬಿ.ಎಸ್.ರಾವ್, ಕಾರ್ಯದರ್ಶಿ ಜಯದೇವ ಖಂಡಿಗೆ, ಆರ್‍ಎಸ್‍ಎಸ್ ಮುಖಂಡ ಗೋಪಾಲ ಚೆಟ್ಟಿಯಾರ್ ಮೊದಲಾದವರು ಉಪಸ್ಥಿತರಿದ್ದರು. ಕೆ.ಜಗದೀಶ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು.
ಮುಖ್ಯಾಂಶ:
ಪಾದಯಾತ್ರೆಯ ಸಮಾರೋಪದ ಭಾಗವಾಗಿ ಶ್ರೀಮಧೂರು ಸನ್ನಿಧಿಯಲ್ಲಿ ಆಶೀರ್ವಚನ ನೀಡಿದ ಎಡನೀರು ಶ್ರೀಗಳು, ಸಮಾಜದ ಉನ್ನತಿಗೆ, ಗೊಂದಲ, ಸವಾಲುಗಳ ನಿವಾರಣೆಗೆ ಪಾದಯಾತ್ರೆಯ ಸಂಕಲ್ಪ ಮಾಡಿದ್ದು ಈ ಮೂಲಕ ಸಾಫಲ್ಯವಾಗಿದೆ ಎಂದರು. ಸನಾತನ ಧರ್ಮದ ಏಳ್ಗೆಯಿಂದ ಸಮಾಜದ ಉದ್ದಾರ ಸಾಧ್ಯ. ಪ್ರತಿಯೊಬ್ಬರೂ ಅನುಭವಿಸುವ ಸಂಕಷ್ಟಗಳಿಗೆ ಭಗವದ್ ಕೃಷೆಯ ಮೂಲಕ ತೊಡಕುಗಳ ನಿವಾರಣೆಯಾಗಬೇಕು. ತನ್ಮೂಲಕ ನೆಮ್ಮದಿ ಪ್ರಾಪ್ತಿಯಾಗಬೇಕೆಂಬ ಸಂಕಲ್ಪ ಇತ್ತೆಂದು ತಿಳಿಸಿದರು.